ಬೆಂಗಳೂರು(ಆ:01): : ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧಿಸಿದಂತೆ ಮಾಜಿ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರನ್ನು ಎಸ್‌ಐಟಿ ಪೊಲೀಸರು ಬುಧವಾರ ಸತತ ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನೋಟಿಸ್‌ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಗೆ ಸಿಐಡಿ ಆವರಣದಲ್ಲಿರುವ ಎಸ್‌ಐಟಿ ಕಚೇರಿಗೆ ವಿಚಾರಣೆಗೆ ಆಗಮಿಸಿದ ಮಾಜಿ ಸಚಿವರನ್ನು ಎಸ್‌ಐಟಿ ಮುಖ್ಯಸ್ಥ ಬಿ.ಆರ್‌.ರವಿಕಾಂತೇಗೌಡ ಹಾಗೂ ಡಿಸಿಪಿ ಎಸ್‌.ಗಿರೀಶ್‌ ಪ್ರಶ್ನಿಸಿದರು. ಕೊನೆಗೆ ರಾತ್ರಿ 8.30ರ ವೇಳೆ ವಿಚಾರಣೆ ಅಂತ್ಯವಾಯಿತು ಎನ್ನಲಾಗಿದೆ.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಜಮೀರ್‌, ನನಗೆ ಐಎಂಎ ಮಾಲಿಕ ಮನ್ಸೂರ್‌ ಪರಿಚಯವಿರಲಿಲ್ಲ. ಎಲ್ಲೋ ಇಫ್ತಾರ್‌ ಕೂಟಗಳಲ್ಲಿ ಆತ ಮುಖಾಮುಖಿಯಾಗುತ್ತಿದ್ದ. ಆದರೆ ಯಾವತ್ತಿಗೂ ನಾನು ಆತನೊಂದಿಗೆ ಆತ್ಮೀಯ ಒಡನಾಟ ಹೊಂದಿರಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು. ನನಗೆ ಮುಜಾಹಿದ್‌ (ಬಿಬಿಎಂಪಿಯ ನಾಮನಿದೇರ್ಶಿತ ಸದಸ್ಯ) ಮೂಲಕ ಮನ್ಸೂರ್‌ ಪರಿಚಯವಾಗಿತ್ತು. ನಂತರ ಮುಜಾಹಿದ್‌ ಮುಖಾಂತರವೇ ರಿಚ್ಮಂಡ್‌ ಟೌನ್‌ ಸಮೀಪದ ಕಟ್ಟಡವನ್ನು ಮನ್ಸೂರ್‌ಗೆ .9 ಕೋಟಿಗೆ ಮಾರಾಟ ಮಾಡಿದ್ದೆ. ಈ ಭೂ ಖರೀದಿ ಬಗ್ಗೆ ಚುನಾವಣಾ ಅಫಿಡವಿಟ್‌ನಲ್ಲಿ ಸಹ ಪ್ರಸ್ತಾಪಿಸಿದ್ದೇನೆ ಎಂದು ಪ್ರತಿಪಾದಿಸಿದರು.

ನಾನು ಯಾವುದೇ ತಪ್ಪು ಮಾಡಿಲ್ಲ. ಮನ್ಸೂರ್‌ನನ್ನು ನಾನು ಯಾವತ್ತೂ ಭೇಟಿಯಾಗಿಲ್ಲ ಎಂದು ಜಮೀರ್‌ ಸ್ಪಷ್ಟಪಡಿಸಿದರು. ಐಎಂಎ ಮಾಲಿಕ ಮಹಮ್ಮದ್‌ ಮನ್ಸೂರ್‌ ಖಾನ್‌ಗೆ ತಮ್ಮ ಆಸ್ತಿಯನ್ನು ಜಮೀರ್‌ ಮಾರಾಟ ಮಾಡಿದ್ದರು. ಈ ವ್ಯವಹಾರದಲ್ಲಿ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಹಣ ಕೈಬದಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಹಾಜರಾಗುವಂತೆ ಜಮೀರ್‌ ಅವರಿಗೆ ಎಸ್‌ಐಟಿ ನೋಟಿಸ್‌ ನೀಡಿತ್ತು.