ಬೆಂಗಳೂರು(ಫೆ.15): ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ಮೇಲೆ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಇಂದು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಭದ್ರತಾ ಪಡೆ ಸಭೆ ನಡೆಯಿತು.

ಈ ಸಭೆಯಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಯೋಧರ ಮೇಲೆ ಉಗ್ರರು ದಾಳಿ ನಡೆಸಿ ದೊಡ್ಡ ತಪ್ಪು ಮಾಡಿದ್ಧಾರೆ. ನಾವು ಉಗ್ರರ ದಾಳಿಗೆ ತಕ್ಕ ಪ್ರತ್ಯುತ್ತರವನ್ನು ನೀಡುತ್ತೇವೆ. ಈ ದಾಳಿ ಹಿಂದೆ ಯಾರೇ ಇದ್ದರೂ ತಕ್ಕ ಶೀಕ್ಷೆ ಕೊಟ್ಟೇ ಕೊಡ್ತೆವೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಈಗಾಗಲೇ ಆರ್ಥಿಕವಾಗಿ ದುರ್ಬಲವಾಗಿದೆ. ನಾವು ಹುತಾತ್ಮ ಯೋಧರ ಕನಸನ್ನು ನನಸಾಗಿಸುತ್ತೇವೆ. ಘಟನೆಗೆ ಕಾರಣರಾದವರಿಗೆ ಖಂಡಿತವಾಗಿ ಶಿಕ್ಷೆ ಸಿಗಲಿದೆ. ಇದಕ್ಕೆ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎಂದಿದ್ದಾರೆ.

ದೇಶದಲ್ಲಿ ಆಕ್ರೋಶ ತುಂಬಿದೆ ಜನರ ರಕ್ತ ಕುದಿಯುತ್ತಿದೆ. ಭಾರತ ದೇಶದ ಸುರಕ್ಷತೆ, ಸಮೃದ್ದಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.

ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಉಗ್ರರನ್ನು ಸೆದೆ ಬಡೆಯಲು ಎಲ್ಲಾ ರೀತಿಯಲ್ಲೂ ಸಕಲ ಕ್ರಮಕೈಗೊಳ್ಳುತ್ತಿದ್ದೇವೆ. ನಮ್ಮ ನಾಡಿನ ಸೈನಿಕರನ್ನು ಬಲಿ ತೆಗೆದುಕೊಂಡ ರಕ್ತದ ಪ್ರತಿ ಹನಿಗೂ ಪ್ರತೀಕಾರ ಪಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಭದ್ರತಾ ಸಮಿತಿ ಸಭೆಯ ಭಾಷಣದ ವೇಳೆ ತಿಳಿಸಿದ್ಧಾರೆ.

ನಾವು ಉಗ್ರರಿಗೆ ಕಲಿಸುವ ಪಾಠದ ದನಿ ಇಡೀ ಜಗತ್ತಿಗೆ ಕೇಳಿಸಬೇಕಿದೆ. ಪಾಕಿಸ್ತಾನ ನಮ್ಮ ಭಾರತದ ಮೇಲೆ ದಾಳಿ ನಡೆಸುತ್ತಿದೆ. ಈ ದಾಳಿಗಳಿಂದ ತಮ್ಮ ಕನಸು ನನಸ್ಸಾಗುತ್ತದೆ ಎಂದರೇ ಅದು ಮೂಖರ್ತನ. ಉಗ್ರರ ಕೃತ್ಯಕ್ಕೆ ಸೂಕ್ತ ಶಿಕ್ಷೆ ಸಿಗಲಿದೆ ಎಂದಿದ್ದಾರೆ.

ಇನ್ನು ಈ ಸಭೆಯಲ್ಲಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಗುಪ್ತಚರ ದಳದ ಮುಖ್ಯಸ್ಥರು ಕೂಡ ಭಾಗವಹಿಸಿದ್ದರು. ಇಲ್ಲಿ ಹೇಗೆ ಉಗ್ರರನ್ನು ಸೆದೆ ಬಡೆಯಬೇಕು; ಅದಕ್ಕಾಗಿ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಭಾರತ ಯೋಧರ ಮೇಲೆ ಜೈಷೆ-ಮೊಹಮ್ಮದ್ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ನಮ್ಮ ಯೋಧರನ್ನು ಬಲಿ ಪಡೆದಿರುವ ಉಗ್ರರ ವಿರುದ್ಧ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರೆಲ್ಲಾ ತಮ್ಮದೇ ರೀತಿಯಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.