ಮೈಸೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಹುಮತ ಸಾಬೀತು ವೇಳೆ ಬಿಜೆಪಿಯವರೇ ಅವರ ವಿರುದ್ಧ ಮತ ಹಾಕಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಬಾಂಬ್‌ ಸಿಡಿಸಿದ್ದಾರೆ. ಭಾನುವಾರ ತಮ್ಮ ಪುತ್ರ ರಾಕೇಶ್‌ ಅವರ ಮೂರನೇ ವರ್ಷದ ಪುಣ್ಯತಿಥಿಗೆ ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ವಿಷಯ ತಿಳಿಸಿದರು.

ಇದೇ ವೇಳೆ ಮಾತನಾಡಿದ ಅವರು ಪ್ರತಿಪಕ್ಷದ ಸದಸ್ಯರು ಮಾತ್ರವಲ್ಲ, ಆಡಳಿತ ಪಕ್ಷವಾದ ಬಿಜೆಪಿಯವರೇ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಮತ ನೀಡಬಹುದು. ಅಲ್ಲಿ ಏನಾಗಬಹುದು ಎನ್ನುವುದು ನನಗೆ ತಿಳಿದಿಲ್ಲ. ನನ್ನ ಪ್ರಕಾರ ಯಡಿಯೂರಪ್ಪ ಅವರಿಗೆ ಬೆಂಬಲ ಇಲ್ಲ ಎಂದು ಹೇಳಿದರು.

ಇನ್ನ ಮುಂಬೈನಲ್ಲಿರುವ ಅತೃಪ್ತ ಆಪ್ತ ಶಾಸಕರು ತಮಗೆ ಕರೆ ಮಾಡಿದ್ದರು ಎನ್ನುವ ಹೇಳಿಕೆಗೆ ಸಂಬಂಧಪಟ್ಟಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ದೂರವಾಣಿ ಕರೆ ಮಾಡಿದ್ದರು ಎಂದು ಈಗಾಗಲೇ ಹೇಳಿದ್ದೇನೆ. ಪದೇ ಪದೇ ಅದೇ ವಿಚಾರದ ಪ್ರಸ್ತಾಪ ಬೇಡ. ಕರೆ ಮಾಡಿಲ್ಲ ಎಂದು ಹೇಳಿರುವವರು ನನಗೆ ಕರೆ ಮಾಡಿಲ್ಲ ಅಂತ ಸ್ಪಷ್ಟಪಡಿಸಿದರು ಎಂದಿದ್ದಾರೆ.