ಬೆಂಗಳೂರು(ಜು:10): ಮೈತ್ರಿ ಸರ್ಕಾರದ 14 ಶಾಸಕರು ರಾಜೀನಾಮೆ ನೀಡಿದ್ದು, ಬಹುಮತ ಕಳೆದುಕೊಂಡಿರುವ ಪರಿಣಾಮ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಶಾಸಕರು ವಿಧಾನಸೌಧದ ಗಾಂಧಿ ಚೌಕದ ಎದುರು ಧರಣಿ ನಡೆಸುತ್ತಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಸ್ಪೀಕರ್ ರಮೇಶ್ ಕುಮಾರ್ ಅವರು ಈಗಲಾದರೂ ಕಾನೂನುಬದ್ಧವಾಗಿ ಕೆಲಸ ಮಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಲ್ಲಾ ಪಕ್ಷದವರೂ ಸರ್ವಾನುಮತದಿಂದ ರಮೇಶ್ ಕುಮಾರ್ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದ್ದೇವೆ. ಆದರೆ, ಅವರು ಕಾನೂನುಬದ್ಧವಾಗಿ ಕೆಲಸ ಮಾಡುತ್ತಿಲ್ಲ. ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಲು ವಿಳಂಬ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಕ್ರಮಬದ್ಧವಲ್ಲದ ರಾಜೀನಾಮೆ ನೀಡಿದವರು ಮತ್ತೊಮ್ಮೆ ಬಂದು ಸರಿಯಾದ ಮಾದರಿಯಲ್ಲಿ ರಾಜೀನಾಮೆ ಸಲ್ಲಿಸುತ್ತಾರೆ. ಆದರೆ, ರಾಜೀನಾಮೆಗಳು ಕ್ರಮಬದ್ಧವಾಗಿದೆ ಎಂದು ಅವರೇ ಹೇಳಿರುವ ರಾಜೀನಾಮೆಗಳನ್ನಾದರೂ ಕೂಡಲೇ ಕಾನೂನು ಬದ್ಧವಾಗಿ ಅಂಗೀಕಾರ ಮಾಡಲಿ ಎಂದು ತಿಳಿಸಿದ್ದಾರೆ.