ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭಗೊಂಡಿದ್ದು, ಡಿಸೆಂಬರ್ 13ರವರೆಗೂ ಕಲಾಪ ನಡೆಯಲಿದೆ. ಈ ಅಧಿವೇಶನದಲ್ಲಿ ಆರ್ಥಿಕ ಹಿಂಜರಿತ, ನಿರುದ್ಯೋಗ, ಬೆಲೆ ಏರಿಕೆ, ಕಾಶ್ಮೀರದಲ್ಲಿನ ಪರಿಸ್ಥಿತಿ, ದೆಹಲಿ ವಾಯುಮಾಲಿನ್ಯ ಸೇರಿದಂತೆ ಹಲವು ಗಂಭೀರ ವಿಚಾರಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳು ರೆಡಿಯಾಗಿವೆ.

ಕಳೆದ ಅಧಿವೇಶನದಲ್ಲಿ ಕಾಶ್ಮೀರದ 370ನೇ ವಿಧಿ ರದ್ದು ಸೇರಿದಂತೆ ಹಲವು ಮಸೂದೆಗಳ ಮೇಲಿನ ಚರ್ಚೆ, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿತ್ತು. ಗಲಾಟೆ, ಭಾರಿ ವಿರೋಧದ ನಡುವೆಯೂ ಹಲವು ಮಸೂದೆಗಳು ಪಾಸ್ ಆಗಿ, ಸರ್ಕಾರ ಅನುಮೋದನೆ ಪಡೆದಿತ್ತು.

ಈ ಬಾರಿಯೂ ಪೌರತ್ವ ಕಾಯ್ದೆ ತಿದ್ದುಪಡಿ, ವೈಯಕ್ತಿಕ ಮಾಹಿತಿ ಸಂರಕ್ಷಣಾ ಮಸೂದೆ, ದಿವಾಳಿತನ ತಿದ್ದುಪಡಿ ಮಸೂದೆ, ಬಹುರಾಜ್ಯ ಸಹಕಾರಿ ಸಂಘಗಳ ತಿದ್ದುಪಡಿ ಮಸೂದೆ ಸೇರಿದಂತೆ 35 ಮಹತ್ವದ ಮಸೂದೆಗಳನ್ನು ಮಂಡಿಸಲು ಸರ್ಕಾರ ಸಿದ್ಧವಿದ್ದು, ಈ ನಡುವೆ ವಿಪಕ್ಷಗಳ ಜತೆ ಭಾರಿ ಜಟಾಪಟಿ ನಡೆಯುವ ಸಾಧ್ಯತೆ ಇದೆ.