ಕೋಲ್ಕತ್ತಾ(ಫೆ.04): ಶಾರದಾ ಚಿಟ್‍ಫಂಡ್ ಮತ್ತು ರೋಸ್ ವ್ಯಾಲಿ ಪಾಂಝಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಕೊಲ್ಕತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರ ಮನೆಗೆ ತೆರಳಿದ್ದ ಸಿಬಿಐ ಅಧಿಕಾರಿಗಳನ್ನೇ ಸ್ಥಳೀಯ ಪೊಲೀಸರು ಬಂಧಿಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಭಾನುವಾರ ಸಂಜೆ 6.30ರ ವೇಳೆಗೆ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ನಿವಾಸಕ್ಕೆ 40ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳ ತಂಡ ಆಗಮಿಸಿದೆ. ಸುದ್ದಿ ತಿಳಿಯುತ್ತಲೇ ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕ ಸೇರಿದಂತೆ ಹಿರಿಯ ಅಧಿಕಾರಿಗಳು ಧಾವಿಸಿ ಸಿಬಿಐ ತಂಡ ಮನೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಈ ವೇಳೆ ಸಿಬಿಐ ಅಧಿಕಾರಿಗಳು ಮತ್ತು ಕೋಲ್ಕತ್ತಾ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.

ಇನ್ನು ಅಧಿಕಾರಿಗಳನ್ನು ವಶಕ್ಕೆ ಪಡೆದ ಬೆನ್ನಲ್ಲೆ ಸಿಬಿಐ ತನ್ನ ಸಿಬ್ಬಂದಿ ಭದ್ರತೆಗೆ ಸಿಆರ್‍ಪಿಎಫ್ ನಿಯೋಜಿಸಿದೆ. ರಾಜ್ಯಪಾಲರಾದ ಕೇಸರಿನಾಥ್ ತ್ರಿಪಾಠಿ ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿದೆ.

ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ಅಧಿಕಾರಿಗಳು ಬಹುಕೋಟಿ ಹಗರಣದ ವಿರುದ್ಧ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿರುವ ಸಿಬಿಐನ ಹಂಗಾಮಿ ನಿರ್ದೇಶಕ ಎಂ.ನಾಗೇಶ್ವರ ರಾವ್ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಸಿಬಿಐ ಅಧಿಕಾರಿಗಳು ಬಂದ ವಿಚಾರ ತಿಳಿಯುತ್ತಲೇ ಕೋಪಗೊಂಡ ಮಮತಾ ಬ್ಯಾನರ್ಜಿ ರಾಜೀವ್ ಕುಮಾರ್ ನಿವಾಸಕ್ಕೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿದರು. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ದಂಗೆಗೆ ಕಾರಣವಾಗುತ್ತಿದ್ದಾರೆ, ಎಂದು ವಾಗ್ದಾಳಿ ನಡೆಸಿದ ಅವರು ಕೋಲ್ಕತ್ತಾದಲ್ಲಿರುವ ಸಿಬಿಐ ಕಚೇರಿ ಬ್ಲಾಕ್ ಮಾಡಿ ಅಹೋರಾತ್ರಿ ಧರಣಿ ಕುಳಿತಿದ್ದು, ಮೋದಿ ತೊಲಗಿಸಿ, ದೇಶ ಉಳಿಸಿ ಆಂದೋಲನಕ್ಕೆ ಕರೆ ನೀಡಿದ್ದಾರೆ.