ಬೆಂಗಳೂರು(ಜು:01): ನಾವು ಯಾವುದೇ ಶಾಸಕರನ್ನು ಬಿಜೆಪಿಗೆ ಬರುವಂತೆ ಆಹ್ವಾನಿಸಿಲ್ಲ. ಸಮಾಧಾನಗೊಂಡಿರುವ ಶಾಸಕರು ರಾಜೀನಾಮೆ ನೀಡಿದರೆ ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಈ ಸರ್ಕಾರದಲ್ಲಿ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾಗಿದ್ದು, ಬಹುತೇಕರು ರಾಜೀನಾಮೆ ನೀಡಿ ಹೊರಬರಲಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

ಬಳ್ಳಾರಿಯಲ್ಲಿ ಅಸಮಾಧಾನಗೊಂಡಿದ್ದ ಶಾಸಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ನಾನು ಈ ಜಿಲ್ಲೆಯಿಂದಲೇ ಅತೃಪ್ತ ಶಾಸಕರ ರಾಜೀನಾಮೆ ಆರಂಭವಾಗುತ್ತದೆ ಎಂದು ಹೇಳಿದ್ದೆ. ಕಾಂಗ್ರೆಸ್-ಜೆಡಿಎಸ್‍ನಲ್ಲಿರುವ ಅನೇಕ ಶಾಸಕರು ನನ್ನ ಬಳಿ ನೋವು ಹೇಳಿಕೊಂಡಿದ್ದರು. ಹಾಗಾಗಿ ಮೈತ್ರಿ ಸರ್ಕಾರದ ಪತನ ಬಳ್ಳಾರಿಯಿಂದಲೇ ಪ್ರಾರಂಭವಾಗಲಿದೆ ಎಂದು ನಾನು ಹೇಳಿದ್ದೆ ಎಂಬುದನ್ನು ಸಮರ್ಥಿಸಿಕೊಂಡರು.

ಕಾಂಗ್ರೆಸ್-ಜೆಡಿಎಸ್ ನಾಯಕರು ಆಪರೇಷನ್ ಕಮಲ ಎನ್ನಲಿ ಅಥವಾ ಇನ್ನೇನೇ ಅನ್ನಲಿ. ನಾವು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪಕ್ಷದ ತತ್ವಸಿದ್ದಾಂತ ನಾಯಕತ್ವವನ್ನು ಒಪ್ಪಿಕೊಂಡು ಬಂದರೆ ಯಾರನ್ನೇ ಆಗಲಿ ಬಿಜೆಪಿ ಸೇರ್ಪಡೆ ಮಾಡಿಕೊಳ್ಳಲಿದೆ ಎಂದು ಹೇಳಿದರು.