ಮುಂಬೈ(ಜುಲೈ.10) ನಾವು ಯಾವುದೇ ಕಾರಣಕ್ಕೂ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗುವುದಿಲ್ಲ. ಅವರ ಜೊತೆ ಮಾತುಕತೆಯನ್ನೂ ನಡೆಸುವುದಿಲ್ಲ. ರಾಜಕಾರಣವೇ ಬೇರೆ, ವಿಶ್ವಾಸವೇ ಬೇರೆ. ನಮ್ಮ ನಿರ್ಧಾರ ಅಚಲ ನಾವು ಯಾವುದೇ ಕಾರಣಕ್ಕೂ ರಾಜಿನಾಮೆಯನ್ನು ಹಿಂಪಡೆಯುವುದಿಲ್ಲ ಎಂದು ಮುಂಬೈನಲ್ಲಿ ಬೀಡು ಬಿಟ್ಟಿರುವ ಭಿನ್ನಮತೀಯ ಶಾಸಕರು ಸಂಧಾನದ ಬಾಗಿಲು ಬಂದ್ ಮಾಡಿದ್ದಾರೆ. ಅತೃಪ್ತ ಬಣದ ಶಾಸಕರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಎಚ್.ವಿಶ್ವನಾಥ್, ರಮೇಶ್‍ ಜಾರಕಿಹೊಳಿ, ಬಿ.ಸಿ.ಪಾಟೀಲ್ ಸೇರಿದಂತೆ ಹತ್ತು ಮಂದಿ ಶಾಸಕರು ಮಾತುಕತೆಗೆ ಒಪ್ಪಿಗೆ ನೀಡಿಲ್ಲ.

ಮುಂಬೈನ ಖಾಸಗಿ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್‍ನ 10 ಶಾಸಕರ ಜೊತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸಲು ತೆರಳಿದ್ದರು. ಡಿ.ಕೆ. ಶಿವಕುಮಾರ್ ಅವರನ್ನು ಕುರಿತು ಮಾತನಾಡಿದ ಶಾಸಕರು, ನಾವು ಈಗಾಗಲೇ ಬಹುದೂರ ಸಾಗಿ ಬಂದಿದ್ದೇವೆ. ಡಿ.ಕೆ.ಶಿವಕುಮಾರ್ ನಮಗೆ ಸ್ನೇಹಿತರು. ಅವರ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ನಮ್ಮ ಜೊತೆ ರಾಜಕಾರಣ ಮಾತನಾಡುವ ಅಗತ್ಯವಿಲ್ಲ. ಅವರಿಗೆ ಅವಮಾನವಾಗಬಾರದೆಂದರೆ ಕೂಡಲೇ ಬೆಂಗಳೂರಿಗೆ ಹಿಂತಿರುಗಲಿ ಎಂದು ಅತೃಪ್ತರು ಮನವಿ ಮಾಡಿದರು.

ರಾಜಕಾರಣವೇ ಬೇರೆ, ಸ್ನೇಹವೇ ಬೇರೆ. ದಯವಿಟ್ಟು ಬೆಂಗಳೂರಿಗೆ ಹಿಂತಿರುಗಿ ಎಂದು ಡಿಕೆಶಿವಕುಮಾರ್ ಆಪ್ತರು ಒತ್ತಾಯಿಸಿದರು. ಬೆಂಗಳೂರಿಗೆ ಬಂದ ತಕ್ಷಣವೇ ನಿಮ್ಮನ್ನು ನಾವೇ ಖುದ್ದು ಭೇಟಿಯಾಗುತ್ತೇವೆ. ಈಗ ಅದರ ಅಗತ್ಯವಿಲ್ಲ ಎಂದು ನಿನ್ನೆಯೇ ಹೇಳಿದ್ದೆವು. ನಿಮಗೆ ಅವಮಾನವಾದರೆ ನಮ್ಮ ಮನಸ್ಸಿಗೆ ನೋವಾಗುತ್ತದೆ. ಕಳೆದ ಒಂದು ವರ್ಷದಿಂದ ನಮಗಾಗುತ್ತಿರುವ ನೋವು ಹೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಈಗ ಮಾತುಕತೆ ನಡೆಸಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.