ಬೆಂಗಳೂರು(ಜು:18): ವಿಶ್ವಾಸ ಮತ ಯಾಚನೆಯಲ್ಲಿ ರಾಜ್ಯ ಸರ್ಕಾರಕ್ಕೆ ಸೋಲಾಗಿದೆ, ನಾವು ಸರ್ಕಾರ ರಚನೆ ಮಾಡುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಯಾವುದೇ ಕಾರಣಕ್ಕೂ ವಿಶ್ವಾಸ ಮತಯಾಚನೆಯಲ್ಲಿ ಗೆಲ್ಲುವ ಲಕ್ಷಣಗಳಿಲ್ಲ. ಅವರ ಸಂಖ್ಯೆ 100ಕ್ಕೂ ಕಡಿಮೆಯಾದರೂ ಅಚ್ಚರಿ ಪಡಬೇಕಾದ ಅಗತ್ಯವಿಲ್ಲ, ನಾವು 105 ಮಂದಿ ಶಾಸಕರಿದ್ದೇವೆ. ಇಬ್ಬರು ಪಕ್ಷೇತರ ಶಾಸಕರು ನಮಗೆ ಬೆಂಬಲ ನೀಡಿರುವುದರಿಂದ ನಮ್ಮ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. 16 ಮಂದಿ ಶಾಸಕರು ರಾಜೀನಾಮೆ ಕೊಟ್ಟಿರುವುದು ಹಾಗೂ ಇಬ್ಬರು ಶಾಸಕರು ಬೆಂಬಲ ಹಿಂಪಡೆದಿದ್ದರಿಂದ ಸಮ್ಮಿಶ್ರ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ ಎಂದು ತಿಳಿಸಿದರು.

ಸ್ಪೀಕರ್ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡಬೇಕು. ವಿಶ್ವಾಸ ಮತಯಾಚನೆ ನಿರ್ಣಯವನ್ನು ನೇರವಾಗಿ ಮತಕ್ಕೆ ಹಾಕುವರೋ ಇಲ್ಲವೇ ಚರ್ಚೆಗೆ ಕೊಡುವರೋ ಎಂಬುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು.