ಮೈಸೂರು(ಮಾ,01): ಇನ್ನೊಬ್ಬರ ನೆಲದಲ್ಲಿ ನಿಂತು ಅಷ್ಟು ಧೈರ್ಯವಾಗಿರುವ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಹ್ಯಾಟ್ಸಾಫ್ ಹೇಳುತ್ತೇನೆ. ಅವರು ರಿಯಲ್ ಹೀರೋ, ನಾವೆಲ್ಲಾ ಡಮ್ಮಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನಲ್ಲಿ ಹೇಳಿದ್ದಾರೆ.

ಮೈಸೂರಿನಲ್ಲಿ ಛಾಯಾಚಿತ್ರ ಪ್ರದರ್ಶನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಒಂದು ಒಳ್ಳೆಯ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಿದ್ದೇವೆ. ಇದರಲ್ಲಿ ಬಂದ ಹಣವನ್ನು ಅರಣ್ಯ ಸಂರಕ್ಷಣೆಗೆ ಖರ್ಚು ಮಾಡುತ್ತೇನೆ ಎಂದು ತಿಳಿಸಿದರು. ನನಗೆ ಛಾಯಾಚಿತ್ರದ ಬಗ್ಗೆ ಅರಿವೇ ಇರಲಿಲ್ಲ. ನನ್ನ ಸ್ನೇಹಿತರು ಇದರ ಹುಚ್ಚು ಹಿಡಿಸಿದರು. ಬಳಿಕ ನಾನು ಕಬಿನಿ, ಕೇರಳ ಸೇರಿದಂತೆ ಹಲವೆಡೆ ಓಡಾಡಿ ಈ ಚಿತ್ರಗಳನ್ನು ಸೆರೆ ಹಿಡಿದಿದ್ದೇನೆ. ಕಾಡಿನಲ್ಲಿ ಪ್ರಾಣಿಗಳನ್ನು ನೋಡುವುದೇ ಒಂದು ಚಾಲೆಂಜ್. ಆ ಅನುಭವದ ಮುಂದೆ ಬೇರೆ ಏನು ಇಲ್ಲ. ಎಲ್ಲರು ಕಾಡು ಉಳಿಸಿ ಇಲ್ಲದಿದ್ದರೆ, ಮುಂದೆ ಪ್ರಾಣಿಗಳನ್ನು ಫೋಟೋದಲ್ಲೇ ನೋಡಬೇಕಾಗುತ್ತೆ. ಅದಕ್ಕಾದರೂ ಕಾಡನ್ನು ಸಂರಕ್ಷಿಸೋಣ ಎಂದು ಮನವಿ ಮಾಡಿಕೊಂಡರು.

ಇನ್ನು ಯಜಮಾನ ಚಿತ್ರದ ಕುರಿತು ಮಾತನಾಡಿದ ಅವರು, ಯಜಮಾನ ಈಗಷ್ಟೇ ಬಿಡುಗಡೆಯಾಗಿದ್ದು, ಎಲ್ಲರು ಸಿನಿಮಾ ನೋಡುತ್ತಿದ್ದಾರೆ. ಎಲ್ಲರು ಚಿತ್ರ ನೋಡಿ ಎಂದು ದರ್ಶನ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡರು.