ಬೆಂಗಳೂರು(ಜೂ:05): ಗ್ರಾಮ ವಾಸ್ತವ್ಯದ ಮುಖ್ಯ ಗುರಿ ಆಡಳಿತ ಯಂತ್ರದ ಕಾರ್ಯವೈಖರಿಯನ್ನು ಅರಿಯುವುದಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಸರ್ಕಾರ ರೂಪಿಸಿರುವ ಯೋಜನೆಗಳು ಫಲಕಾರಿಯಾಗಿದೆಯೇ? ಯೋಜನೆ ಬಗ್ಗೆ ಜನರ ಅಭಿಪ್ರಾಯವೇನು? ಎಂಬುದನ್ನು ಅರಿಯುವುದು , ಸುತ್ತಮುತ್ತಲಿನ ಗ್ರಾಮಗಳ ಜನರ ಮನವಿಗಳನ್ನು ಸ್ವೀಕರಿಸಿ ಕಾನೂನು ವ್ಯಾಪ್ತಿಯಲ್ಲಿ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡುವುದು ಗ್ರಾಮವಾಸ್ತವ್ಯದ ಮುಖ್ಯ ಉದ್ದೇಶವಾಗಿದೆ ಎಂದರು.

ಮಾಧ್ಯಮಗಳಲ್ಲಿ ಗ್ರಾಮ ವಾಸ್ತವ್ಯದ ಕುರಿತು ಬರುತ್ತಿರುವ ವರದಿಗಳಲ್ಲಿರುವ ಸಕಾರಾತ್ಮಕ ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಕಾನೂನು ಚೌಕಟ್ಟಿನಲ್ಲಿ ಸಾಧ್ಯವಾಗುವುದನ್ನು ಅನುಸರಿಸಲು ಪ್ರಯತ್ನಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಜನರಿಗೆ ಅಗತ್ಯವಿರುವ ಯೋಜನೆಗಳನ್ನು ಜಾರಿಗೊಳಿಸಿದಾಗ ಸಹಜವಾಗಿ ಯಶಸ್ವಿಯಾಗುತ್ತವೆ. ಆದರೆ ಯೋಜನೆಗಳನ್ನು ಜನರ ಮೇಲೆ ಹೇರಿದರೆ ಯಶಸ್ವಿಯಾಗದು. ಈ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ತಮ್ಮ ಅನಿಸಿಕೆ ಎಂದಿದ್ದಾರೆ.