ವಾಷಿಂಗ್‍ಟನ್(ಫೆ.23): ಪುಲ್ವಾಮ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿ ಬಹಳ ಅಪಾಯದಲ್ಲಿದೆ ಎಂದು ಅಮೆರಿಕಾದ ಅದ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಪುಲ್ವಾಮ ಉಗ್ರರ ದಾಳಿಯಲ್ಲಿ 40 ಸಿಆರ್‍ಪಿಎಫ್ ಪೊಲೀಸರು ವೀರಮರಣವನ್ನು ಹೊಂದಿದ್ದರು. ಇದನ್ನು ವಿಶ್ವಸಂಸ್ಥೆ ಸಹ ಖಂಡಿಸಿತ್ತು. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಅವರು, ಇದೀಗ ಪಾಕಿಸ್ತಾನ ಮತ್ತು ಭಾರತ ನಡುವೆ ಬಹಳ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದ್ದು ಅಪಾಯಕಾರಿ ಹಂತವನ್ನು ತಲುಪಿದೆ. ಅಮೆರಿಕಾ ಇದರಲ್ಲಿ ಭಾಗಿಯಾಗಲಿದೆ ಎಂದು ಡೊನಾಲ್ಡ್ ಟ್ರಂಪ್ ಓವಲ್ ಆಫೀಸ್ ನಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ನಾನು ಸಹ ಇದನ್ನು ಅರ್ಥಮಾಡಿಕೊಳ್ಳ ಬಲ್ಲೆ. ಎರಡು ದೇಶಗಳ ಅಧಿಕಾರಿಗಳೊಂದಿಗೆ ಮಾತನಾಡುತ್ತೇವೆ. ಈ ವಿಷಯದ ಕುರಿತು ಆನೇಕ ಜನರ ಜೊತೆ ಚರ್ಚಿಸಲಾಗಿದೆ. ಇದು ಬಹಳ ಸೂಕ್ಷ್ಮವಾದ ಸಮಸ್ಯೆಯಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಸಾಕಷ್ಟು ಸಮಸ್ಯೆಗಳಿವೆ ಎಂದು ಅವರು ಹೇಳಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕ ದಾಳಿಯು ಪಾಕಿಸ್ತಾನ ಮತ್ತು ಭಾರತ ನಡುವಿನ ಉದ್ವಿಗ್ನತೆಯ ಉಲ್ಬಣಕ್ಕೆ ಕಾರಣವಾಗಿದೆ. ಶುಕ್ರವಾರ ಭಾರತದ ಆರೋಪಕ್ಕೆ ಪಾಕ್ ಎಚ್ಚರಿಕೆಯನ್ನು ನೀಡಿದೆ ಎಂದು ಹೇಳಿದರು.

ಭಯೋತ್ಪಾದಕ ಸಂಘಟನೆಗಳನ್ನು ಸಲಹುತ್ತಿರುವ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕಿಸಲು ಭಾರತವು ರಾಜತಾಂತ್ರಿಕ ಆಕ್ರಮಣವನ್ನು ಆರಂಭಿಸಿದೆ. ಮೋಸ್ಟ್ ಫೇವರ್ಡ್ ಪಟ್ಟಿಯಿಂದ ಪಾಕ್‍ಅನ್ನು ತೆಗೆದುಹಾಕಲಾಗಿದ್ದು, ಸರಕುಗಳ ಮೇಲೆ 200 ಪ್ರತಿಶತ ಕಸ್ಟಮ್ಸ್ ತೆರಿಗೆಯನ್ನು ವಿಧಿಸಿದೆ.

ಅಮೆರಿಕವು ಪಾಕಿಸ್ತಾನದೊಂದಿಗೆ ಸಂಬಂಧವನ್ನು ಸುಧಾರಿಸಿದೆ ಮತ್ತು ಪಾಕಿಸ್ತಾನ ಮುಖಂಡರು ಹಾಗೂ ಅಧಿಕಾರಿಗಳ ಜೊತೆ ಎರಡು ದೇಶಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದೆ. ನಾವು ಪಾಕಿಸ್ತಾನಕ್ಕೆ ವರ್ಷಕ್ಕೆ 1.3 ಬಿಲಿಯನ್ ಡಾಲರ್ ಪಾವತಿಸುತ್ತಿದ್ದೇವು . ಈಗ ನಾವ ಆ ಪಾವತಿಯನ್ನು ಕೊನೆಗೊಳಿಸಿದ್ದೇವೆ. ಏಕೆಂದರೆ ಅವರು ನಮಗೆ ಸರಿಯಾದ ರೀತಿಯಲ್ಲಿ ಸಹಕಾರಿಸುತ್ತೀಲ್ಲ ಎಂದು ಟ್ರಂಪ್ ಪಾಕ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫೆ.14 ರಂದು ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ದಾಳಿಯಿಂದಾಗಿ ಸಿಆರ್ ಪಿ ಎಫ್ ನ 40 ಸಿಬ್ಬಂದಿ ಮೃತಪಟ್ಟು , ಹಲವು ಯೋಧರು ಗಾಯಗೊಂಡಿದ್ದರು. ಈ ಕೃತ್ಯದ ಹೊಣೆಯನ್ನು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹೊತ್ತಿದೆ.