ಬೆಂಗಳೂರು(ಜೂ.04): ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಮದ್ಯೆ ಅಸಮಾಧಾನದ ಹೊಗೆ ಜೋರಾಗಿಯೇ ಇದೆ. ಕಾಂಗ್ರೆಸ್ ನಾಯಕತ್ವದ ವಿರುದ್ಧ ರೋಷನ್ ಬೇಗ್ ಕಿಡಿಕಾರಿದ ನಂತರ ಈಗ ಮತ್ತೊಬ್ಬ ದೊಡ್ಡ ನಾಯಕ ರಾಮಲಿಂಗಾ ರೆಡ್ಡಿ ಪಕ್ಷ ಬಿಡಲು ತಯಾರಾಗಿದ್ದಾರೆ.

ಇವತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾದ ಅವರು ಅತೃಪ್ತ ಶಾಸಕರಿಗೆ ಮಂತ್ರಿಗಿರಿ ಕೊಟ್ಟು ತಮ್ಮಂಥ ನಿಷ್ಠಾವಂತ ವ್ಯಕ್ತಿಯನ್ನು ಕಡೆಗಣಿಸಿರುತ್ತಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ದಿನೇಶ್ ಗುಂಡೂರಾವ್ ಅವರ ಜೊತೆ ಮುಕ್ಕಾಲು ಗಂಟೆ ಮಾತುಕತೆ ನಡೆಸಿರುವ ಅವರು ತಾನು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಇನ್ನು ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ನಿರ್ಧಾರವನ್ನು ಕೇಳಿ ದಿನೇಶ್ ಗುಂಡೂವ್ ಸ್ವಲ್ಪ ಗಲಿಬಿಲಿಗೊಂಡು ರಾಮಲಿಂಗರೆಡ್ಡಿ ಅವರನ್ನ ಸಮಾಧಾನಪಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಕೇವಲ ಇಬ್ಬರು ಪಕ್ಷೇತರರನ್ನು ಮಾತ್ರ ಸಚಿವರನ್ನಾಗಿ ಮಾಡುತ್ತೇವೆ. ಬೇರೆ ಯಾರಿಗೂ ಮಂತ್ರಿಗಿರಿ ಕೊಡುತ್ತಿಲ್ಲ. ತಾವು ಪಕ್ಷ ಬಿಡಬೇಡಿ ಎಂದು ದಿನೇಶ್ ಅವರ ಮನವೊಲಿಸಲು ಯತ್ನಿಸಿದ್ದಾರೆ.

ಇತ್ತ, ರಾಮಲೀಗರೆಡ್ಡಿ ರಾಜೀನಾಮೆ ವಿಚಾರ ತಿಳಿಯುತ್ತಿದ್ದಂತೆ ಅವರನ್ನು ಪಕ್ಷಕ್ಕೆ ಕರೆತರಲು ಬಿಜೆಪಿ ಸಜ್ಜಾಗಿದೆ. ಆರು ಬಾರಿ ಶಾಸಕರಾಗಿರುವ ಅಪಾರ ರಾಜಕೀಯ ಅನುಭವಿ ರಾಮಲಿಂಗಾರೆಡ್ಡಿ ಅವರು ಬಿಜೆಪಿ ಸೇರಲಿದ್ದಾರೆಂಬ ಸುದ್ದಿಗಳು ಲೋಕಸಭೆ ಚುನಾವಣೆಗೂ ಮುನ್ನವೇ ಕೇಳಿಬಂದಿದ್ದವು. ಆದರೆ, ರಾಮಲಿಂಗಾ ರೆಡ್ಡಿ ಈ ಸುದ್ದಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರು. ಇದೀಗ ಆ ಸುದ್ದಿಗಳು ಮತ್ತೆ ಕೇಳಿಬರುತ್ತಿರುವುದು ಬಾರೀ ಕೂತುಹಲಕ್ಕೆ ಕಾರಣವಾಗಿದೆ.

ಒಂದು ವೇಳೆ, ರೋಷನ್ ಬೇಗ್ ಮತ್ತು ರಾಮಲಿಂಗಾ ರೆಡ್ಡಿ ಈ ಇಬ್ಬರು ಹಿರಿಯ ನಾಯಕರು ನಿರ್ಗಮಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ನಷ್ಟವಾಗುವುದರಲ್ಲಿ ಅನುಮಾನವಿಲ್ಲ.