ಬೆಂಗಳೂರು(ಜುಲೈ.27) ಸ್ಪೀಕರ್ ರಮೇಶ್ ಕುಮಾರ್ ಅವರು ಮೈತ್ರಿ ಪಕ್ಷದ ಅತೃಪ್ತ ಶಾಸಕರಲ್ಲಿ 3 ಜನ ಶಾಸಕರನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಅತೃಪ್ತ ಶಾಸಕರಾದ ರಮೇಶ್ ಎಲ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಪಕ್ಷೇತರ ಶಾಸಕ ಆರ್ ಶಂಕರ್ ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದಾರೆ.

ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಕಳೆದ ಗುರುವಾರ ಈ ೩ಜನ ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಮುಂದಿನ ಉಪ ಚುನಾವಣೆಯಲ್ಲಿ ಕೂಡ ಅವರು ಸ್ಪರ್ಧಿಸುವಂತಿಲ್ಲ ಎಂದು ನಿಷೇಧ ಹೇರಲಾಗಿದೆ. ಸಂವಿಧಾನದ 10ನೇ ವಿಧಿಯ ಪ್ಯಾರಾ 2 (1) (ಎ)ಯಡಿ ಮತ್ತು 191(ಎ)ಯಡಿ 15ನೇ ರಾಜ್ಯ ವಿಧಾನಸಭೆಯ ಶಾಸಕ ಸ್ಥಾನದಿಂದ ಈ ಮೂವರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ.

ರಾಣೆಬೆನ್ನೂರು ಶಾಸಕ ಆರ್ ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ನಿಯಮದಡಿ ಸಂವಿಧಾನದ 10ನೇ ವಿಧಿಯಡಿ ಅನರ್ಹಗೊಳಿಸಲಾಗಿದೆ, ಅವರು ಉಪ ಚುನಾವಣೆಯಲ್ಲಿ ಕೂಡ ಸ್ಪರ್ಧಿಸುವಂತಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ.

ಸ್ಪೀಕರ್ ರಮೇಶ್ ಕುಮಾರ್ ಅವರ ಈ ತೀರ್ಮಾನವನ್ನು ಖಂಡಿಸಿ 3 ಜನ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.