ಡಾಕರ್(ಸೆನೆಗಲ್):ಫೆ01: ಭೂಗತ ಪಾತಕಿ ರವಿ ಪೂಜಾರಿಯನ್ನು ಸೆನೆಗಲ್ ದೇಶದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ.

ಕಳೆದ 15 ವರ್ಷದಿಂದ ದುಬೈ, ಆಸ್ಟ್ರೇಲಿಯಾದಲ್ಲಿ ತಲೆಮರೆಸಿಕೊಂಡು ಬೆದರಿಕೆಯೊಡ್ಡುತ್ತಿದ್ದ ರವಿ ಪೂಜಾರಿಯನ್ನು ಸೆನೆಗಲ್ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿರುವ ಬಗ್ಗೆ ಖಾಸಗಿ ಟವಿ ಚಾನೆಲೊಂದು ವರದಿ ಮಾಡಿದೆ.

60ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿರುವ ರವಿ ಪೂಜಾರಿ ಮೇಲೆ ಕರ್ನಾಟಕ, ಮಹಾರಾಷ್ಟ್ರ, ಕೇರಳ ಸೇರಿ ಹಲವೆಡೆ ಪ್ರಕರಣ ದಾಖಲಾಗಿದ್ದವು.

ಭೂಗತವಾಗಿದ್ದುಕೊಂಡೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ರವಿ ಪೂಜಾರಿಯನ್ನು ಅರೆಸ್ಟ್ ಮಾಡಲು ಭಾರತದ ತನಿಖಾ ಸಂಸ್ಥೆಗಳು ಸೆನೆಗಲ್ ದೇಶದೊಂದಿಗೆ ಸಂಪರ್ಕದಲ್ಲಿದ್ದವು ಎಂದು ತಿಳಿದುಬಂದಿದ್ದು, ಈ ಹಿನ್ನಲೆಯಲ್ಲಿ ಸೆನೆಗಲ್ ಪೊಲೀಸರು ರವಿ ಪೂಜಾರಿಯನ್ನು ವಶಕ್ಕೆ ಪಡೆದಿರಬಹುದು ಎಂದು ಹೇಳಲಾಗುತ್ತಿದೆ.

ಸೆನೆಗಲ್ ಪೊಲೀಸರು ರವಿ ಪೂಜಾರಿಯನ್ನು ವಶಕ್ಕೆ ಪಡೆದಿರುವುದು ಖಚಿತವಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಾಗಿದೆ.