ಬೆಂಗಳೂರು(ಜೂ:03): ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಹಲವು ರಾಜ್ಯಗಳ ರಾಜ್ಯಪಾಲರನ್ನು ಬದಲಾವಣೆ ಮಾಡಲು ಮುಂದಾಗಿದ್ದು, ರಾಜ್ಯಕ್ಕೆ ನೂತನ ರಾಜ್ಯಪಾಲರು ನೇಮಕವಾಗುವ ಸಾಧ್ಯತೆ ಇದೆ. ಹಾಲಿ ರಾಜ್ಯಪಾಲರಾಗಿರುವ ವಜುಭಾಯಿ ವಾಲಾ ಅಧಿಕಾರಾವಧಿ ಆಗಸ್ಟ್ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ. ತೆರವಾಗಲಿರುವ ಈ ಸ್ಥಾನಕ್ಕೆ ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರ ಮಹಾಜನ್, ಮಾಜಿ ಸಚಿವರಾದ ಉಮಾಭಾರತಿ ಹಾಗೂ ಸುಷ್ಮಾಸ್ವರಾಜ್ ಹೆಸರುಗಳು ಕೇಳಿ ಬರುತ್ತಿವೆ.

ಆದರೆ, ಅನಾರೋಗ್ಯದ ಕಾರಣ ಸಂಪುಟಕ್ಕೆ ಸೇರ್ಪಡೆಯಾಗಲು ಸುಷ್ಮಾಸ್ವರಾಜ್ ಹಿಂದೇಟು ಹಾಕಿದ್ದರು. ಹೀಗಾಗಿ ಅವರು ರಾಜ್ಯಪಾಲರಾಗಿ ನೇಮಕವಾಗುವ ಸಾಧ್ಯತೆಗಳು ಕಡಿಮೆ. ಅಲ್ಲದೆ, ಈ ಹಿಂದೆ ಸುಷ್ಮಾಸ್ವರಾಜ್ ಅವರು ಮಾಜಿ ಸಚಿವ ಜನಾರ್ಧನರೆಡ್ಡಿ, ಶ್ರೀರಾಮುಲು, ಕರುಣಾಕರರೆಡ್ಡಿ ಜತೆ ಗುರುತಿಸಿಕೊಂಡಿದ್ದರು. ಹೀಗಾಗಿ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ಮಾಡುವ ಸಾಧ್ಯತೆ ತೀರ ಕಡಿಮೆ ಎನ್ನುತ್ತಿವೆ.

ಇನ್ನು ಮಾಜಿ ಸಚಿವೆ ಉಮಾಭಾರತಿ ಕೂಡ ಸದ್ಯಕ್ಕೆ ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದಾರೆ. ಈ ಹಿಂದೆ ಮಧ್ಯ ಪ್ರದೇಶದ ಮುಖ್ಯಮಂತ್ರಿಯೂ ಆಗಿದ್ದ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡುವ ಬಗ್ಗೆ ಪಕ್ಷದ ವಲಯದಲ್ಲಿ ಚಿಂತನೆ ನಡೆದಿದೆ. ಅಲ್ಲದೆ, ಉಮಾಭಾರತಿಗೆ ಕರ್ನಾಟಕದೊಂದಿಗೆ ಸಾಕಷ್ಟು ಒಡನಾಟ ಇರುವುದರಿಂದ ರಾಜ್ಯಪಾಲರ ಹುದ್ದೆಗೆ ಪಕ್ಷದ ವರಿಷ್ಠರು ಪರಿಗಣಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.