ಚಂಡೀಗಢ(ಏ:17): ಸೌದಿ ಅರೇಬಿಯಾದಲ್ಲಿ ಇಬ್ಬರು ಭಾರತೀಯರ ಶಿರಚ್ಚೇದನ ಮಾಡಲಾಗಿದೆ. ಮತ್ತೊಬ್ಬ ಭಾರತೀಯನನ್ನು ಕೊಲೆ ಮಾಡಿದ ಆರೋಪದ ಮೇಲೆ ಹೋಶಿಯಾರ್ ಪುರದ ಸತ್ವಿಂದರ್ ಕುಮಾರ್ ಹಾಗೂ ಲುಧಿಯಾನದ ಹರ್ಜೀತ್ ಸಿಂಗ್ ಎಂಬುವವರ ಶಿರಚ್ಛೇದನ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.

ಫೆಬ್ರವರಿ 28,2019ರಂದು ಇಬ್ಬರು ಭಾರತೀಯರ ತಲೆ ಕಡಿಯಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಶಿರಚ್ಛೇದನಕ್ಕೂ ಮುನ್ನ ರಿಯಾಧ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅಷ್ಟೇ ಅಲ್ಲದೇ ಶಿರಚ್ಛೇದನಕ್ಕೊಳಗಾದ ಇಬ್ಬರು ಭಾರತೀಯರ ಶವಗಳನ್ನು ಅವರ ಕುಟುಂಬಸ್ಥರಿಗೆ ನೀಡುವುದು ಸಹ ಸೌದಿಯ ನಿಯಮಗಳಂತೆ ಕಷ್ಟಸಾಧ್ಯ ಎಂದು ತಿಳಿಸಿದ್ದಾರೆ.

ಹರ್ಜೀತ್ ಹಾಗೂ ಸತ್ವಿಂದರ್‌ ಇಮಾಮುದ್ದೀನ್‌ರನ್ನು ಹತ್ಯೆ ಮಾಡಿದ್ದರು. ಮೂವರು ಲೂಟಿ ಮಾಡಿದ ಹಣದ ಹಂಚಿಕೆ ವಿಚಾರದಲ್ಲಿ ಜಗಳವಾಡಿಕೊಂಡು ಇಮಾಮುದ್ದೀನ್‌ರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಯ ಕೆಲ ದಿನಗಳ ಬಳಿಕ ಮದ್ಯಪಾನ ಹಾಗೂ ಜಗಳವಾಡುತ್ತಿದ್ದರು ಎಂಬ ಕಾರಣಕ್ಕೆ ಇಬ್ಬರನ್ನು ಬಂಧಿಸಲಾಗಿತ್ತು. ನಂತರ, ಅವರನ್ನು ಗಡೀಪಾರು ಮಾಡಲು ಸೌದಿ ಸರಕಾರ ಚಿಂತಿಸುತ್ತಿದ್ದಂತೆ ಕೊಲೆ ಕೇಸಿನ ಆರೋಪದಡಿ ಅವರು ಸಿಲುಕಿಕೊಂಡರು, ಇದರಿಂದಾಗಿ ಅವರ ಶಿರಚ್ಛೇದನ ಮಾಡಲಾಗಿದೆ ಎನ್ನಲಾಗಿದೆ.