ಶರಣಾಗದೇ ಬಂದೂಕು ಹಿಡಿದು ಸೇನೆಯ ವಿರುದ್ಧ ನಿಂತಲ್ಲಿ ಅವರನ್ನು ಕೊಂದು ಹಾಕಲಾಗುವುದು: ಕಾಶ್ಮೀರಿ ಯುವಕರಿಗೆ ಸೇನೆಯ ಖಡಕ್ ವಾರ್ನಿಂಗ್

ನವದೆಹಲಿ(ಫೆ,19): ನಿಮ್ಮ ಮಕ್ಕಳನ್ನು ಶರಣಾಗುವಂತೆ ಮನವಿ ಮಾಡಿ, ಶರಣಾಗದೇ ಬಂದೂಕು ಹಿಡಿದು ಸೇನೆಯ ವಿರುದ್ಧ ನಿಂತಲ್ಲಿ ಅವರನ್ನು ಕೊಂದು ಹಾಕಲಾಗುವುದು ಎಂದು ಭಾರತೀಯ ಸೇನೆಯ ಚಿನಾರ್ ಸೈನ್ಯದಳದ ಕಮಾಂಡರ್ ಕನ್ವಾಲ್ ಜೀತ್ ಸಿಂಗ್ ಧಿಲಾನ್ ಖಡಕ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಮಂಗಳವಾರ ಸಿಆರ್‍ಪಿಎಫ್, ಸೇನೆ ಹಾಗೂ ಪೊಲೀಸರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೈಯಲ್ಲಿ ಯಾರೇ ಬಂದೂಕು ಹಿಡಿದರೂ ಅವರನ್ನು ಕೊಂದು ಹಾಕಲಾಗುತ್ತದೆ ಉಗ್ರ ಸಂಘಟನೆ ಜತೆ ಸಕ್ರೀಯರಾಗಿರುವ ನಿಮ್ಮ ಮಕ್ಕಳನ್ನು ಶರಣಾಗುವಂತೆ ಮನವಿ ಮಾಡಿ ಮುಖ್ಯವಾಹಿನಿಗೆ ಕರೆ ತನ್ನಿ ಎಂದು ಮನವಿ ಮಾಡಿದ್ದಾರೆ.

ಜೈಷ್ ಮೂಲವನ್ನು ಕಾಶ್ಮೀರದಲ್ಲಿ ಪತ್ತೆ ಹಚ್ಚಿದ್ದೇವೆ. ಕಾಶ್ಮೀರದಲ್ಲಿ ಜೈಷ್ ಸಂಘಟನೆಯ ಕಮಾಂಡರ್ ಆಗಿದ್ದ ರಷೀದ್ ಘಾಜಿಯನ್ನು ಕೊಂದಿದ್ದೇವೆ. ನಿಮ್ಮ ಮಕ್ಕಳನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸಬೇಡಿ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಸಿ.ಆರ್.ಪಿ.ಎಫ್ ಯೋಧರ ಮೇಲೆ ನಡೆದ ದಾಳಿ ಪಾಕ್ ಪ್ರೇರಿತ ದಾಳಿಯಾಗಿದ್ದು, ಘಟನೆ ನಡೆದ 100 ಘಂಟೆಯೊಳಗೆ ಜೈಷ್ ಎ ಮಹಮ್ಮದ್ ಸಂಘಟನೆಯ ಉಗ್ರರನ್ನು ಸದೆಬಡಿದಿದ್ದೇವೆ ಎಂದು ತಿಳಿಸಿದರು.

ಕಾಶ್ಮೀರದಲ್ಲಿ ಯಾರೇ ಬಂದೂಕು ಹಿಡಿದರು ಅವರನ್ನು ಕೊಂದು ಹಾಕುತ್ತೇವೆ. ನಮ್ಮ ಸೇನೆ ಉಗ್ರರನ್ನು ಬುಡ ಸಮೇತ ಕಿತ್ತು ಹಾಕುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇನ್ನು ನಮ್ಮ ಕಾರ್ಯಾಚರಣೆಯಲ್ಲಿ ಯಾವುದೇ ಕಾಶ್ಮೀರಿ ನಾಗರಿಕನಿಗೂ ತೊಂದರೆ ಆಗಿಲ್ಲ ಎಂದರು.

ಜೈಷ್ ಉಗ್ರ ಸಂಘಟನೆ ಪಾಕ್ ಸೇನೆ ಮತ್ತು ಐಎಸ್‍ಐ ನಿಯಂತ್ರಣದಲ್ಲಿದೆ. ಪುಲ್ವಾಮಾ ದಾಳಿಯಲ್ಲಿ ಪಾಕ್ ಸೇನೆ ಭಾಗಿಯಾಗಿರುವುದು ದೃಢಪಟ್ಟಿದೆ. ಇಷ್ಟು ಪ್ರಮಾಣದ ಸ್ಪೋಟ ಈ ಹಿಂದೆ ಆಗಿರಲಿಲ್ಲ, ಇದೆ ಮೊದಲು ಎಂದು ಹೇಳಿದ್ದಾರೆ.