ನವದೆಹಲಿ(ಏ:15): ಮುಂದಿನ ತಿಂಗಳ ಅಂತ್ಯದಲ್ಲಿ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಟೀಮ್ ಇಂಡಿಯಾ ಆಯ್ಕೆಗೆ ಮೊದಲೇ ಎರಡನೇ ವಿಕೆಟ್‌ಕೀಪರ್ ಸ್ಥಾನ ಗಿಟ್ಟಿಸಿಕೊಳ್ಳಲು ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಮಧ್ಯೆ ತೀವ್ರ ಪೈಪೋಟಿ ಆರಂಭವಾಗಿದೆ.

ಪಂತ್ ಹಾಗೂ ಕಾರ್ತಿಕ್‌ರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಕುರಿತು ಟೀಮ್ ಮ್ಯಾನೇಜ್‌ಮೆಂಟ್ ಗಂಭೀರ ಚರ್ಚೆಯಲ್ಲಿ ನಿರತವಾಗಿದ್ದು, ಈ ವರ್ಷದ ಮಾರ್ಚ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ಆಡಿದ ಏಕದಿನ ಸರಣಿಯಲ್ಲಿ ಆಯ್ಕೆ ಮಾಡಲಾಗಿರುವ ತಂಡದ ಮೇಲೆ ಆಯ್ಕೆಗಾರರು ಒಲವು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಎಂಎಸ್‌ಕೆ ಪ್ರಸಾದ್ ನೇತೃತ್ವದಲ್ಲಿ ಆಯ್ಕೆ ಸಮಿತಿಯು ಎ.15 ರಂದು ಮುಂಬೈನಲ್ಲಿ ಸಭೆ ಸೇರಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲಿದೆ.

ಆಯ್ಕೆಗಾರರು ಇತ್ತೀಚೆಗೆ ನಡೆದ ಆಸ್ಟ್ರೇಲಿಯ ವಿರುದ್ಧ ಸರಣಿಯ ಬಳಿಕ ವಿಶ್ವಕಪ್ ತಂಡವನ್ನು ಆಯ್ಕೆ ಮಾಡುವ ವಿಚಾರದಲ್ಲಿ ಗಂಭೀರವಾಗಿದ್ದಾರೆ. ಐಪಿಎಲ್‌ ಅನ್ನು ಆಟಗಾರರ ಫಿಟ್ನೆಸ್ ಖಾತ್ರಿಪಡಿಸಿಕೊಳ್ಳಲು ಪರಿಶೀಲಿಸಬಹುದು. ಪಂತ್‌ಗೆ ಇತ್ತೀಚೆಗೆ ಆಡಲು ಅವಕಾಶ ನೀಡಲಾಗಿತ್ತು. ಆದರೆ, ಕಾರ್ತಿಕ್ ಕೆಲವು ನಿರ್ಣಾಯಕ ಇನಿಂಗ್ಸ್ ಆಡಿದ್ದರು ಎಂಬುದು ತಿಳಿದುಬಂದಿದೆ. ತಂಡದಲ್ಲಿ ಕೇವಲ ಒಂದು ಸ್ಥಾನಕ್ಕಾಗಿ ಮುಕ್ತ ಚರ್ಚೆನಡೆಸಲಾಗುತ್ತದೆ ಎಂದು ಆಸ್ಟ್ರೇಲಿಯ ವಿರುದ್ಧ ಸರಣಿಯ ಬಳಿಕ ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು.