ಜನವರಿ 30 1948 ರಂದು ಆ ಸುದ್ದಿ ಕೇಳಿ ಭಾರತಾಂಬೆಯ ಮಕ್ಕಳೆಲ್ಲ ದುಃಖಿತರಾದರು. ಇಡೀ ದೇಶ ಮೌನದಲ್ಲಿ ಮುಡಿಗಟ್ಟಿತು.್ತ ಈ ವೇಳೆ ಬಿದಲೋಟಿ ರಂಗನಾಥ್ ಬರೆದ ಸಾಲುಗಳು ನೆನಪಾಗುತ್ತೆ ಅದೇನಪ್ಪ ಅಂದ್ರೆ
ಅಲ್ಲಿಗಾಗಲೇ ಸ್ವತಂತ್ರದ ಬಾವುಟ
ಭಾರತಾಂಬೆಯ ಮುಡಿಯಲ್ಲಿತ್ತು.
ಕುಟ್ಟಿ ಎಚ್ಚರಿಸುವ ಕೋಲನ್ನು
ಕಳೆದು ಕೊಂಡ ದುಃಖ ಭರತ ಖಂಡದಲ್ಲಿ ಮುಡಿಗಟ್ಟಿತ್ತು.

ಹೌದು ಅಂದು ಸಂಜೆಯ ಸಮಯ ದೆಹಲಿಯ ಬಿರ್ಲಾ ಹೌಸ್‍ನಲ್ಲಿ ಆಟೋಮೆಟಿಕ್ ಪಿಸ್ತೂಲ್‍ನ ಗುಂಡು ಆ ಮಹಾತ್ಮನ ಪ್ರಾಣವನ್ನೇ ಬಲಿ ಪಡೆದುಕೊಂಡಿತು. ಈ ಘಟನೆ ನಡೆದಿದ್ದು, ಜನವರಿ 30 1948 ರಲ್ಲಿ.

ನಮ್ಮನ್ನು ಸ್ವತಂತ್ರರನ್ನಾಗಿ ಮಾಡಲು ಅವರು ಅನುಸರಿಸಿದ ತತ್ವ ಅದ್ಭುತ. ಶಾಂತಿಯ ಮೂಲ ಮಂತ್ರ, ಅಹಿಂಸೆಯ ರಾಜ ಮಾರ್ಗವನ್ನು ಹಿಡಿದು ತನ್ನ ಗುರಿಯನ್ನು ಮುಟ್ಟಿದ ದಿಟ್ಟೆದೆಯ ಧೀರ.

ಮತ್ತೆ ಬಿದಲೋಟಿ ರಂಗನಾಥ್ ಬರೆದ ಸಾಲುಗಳು ನೆನಪಾಗುತ್ತೆ.

ಆ ಮಹಾತ್ಮ ಕುಟ್ಟುವ ಕೋಲಿನ ಸದ್ದಿಗೆ
ಆಂಗ್ಲರು ನಿದ್ದೆ ಕೆಟ್ಟರು, ಭಾರತೀಯರು ನಿದ್ದೆಯಿಂದೆದ್ದರು.

ಆದರೊಂದು ದಿನ

ಕಾಲ ಮುರಿದುಕೊಂಡ ಕೋಲು
ನೋವಿನಿಂದ ಸುಮ್ಮನೆ
ಉಸಿರೆಳೆದು ಉಸಿರ ಬಿಡುವಾಗ
ನಾಥರಾಮ್ ಗೂಡ್ಸೆ ಎಂಬ ಹಂತಕ ಕೋಲನ್ನೇ ಅಪಹರಿಸಿ ಸುಟ್ಟು ಬಿಟ್ಟ..!

ಈಗಾಗಲೆ ಬಳಸಿದ “ಮಹಾತ್ಮ” ಎಂಬ ಪದದಲ್ಲಿಯೇ ಗೊತ್ತಾಗುತ್ತೆ ಆ ಮಹಾನ್ ವ್ಯಕ್ತಿಯಾರೆಂದು ಅವರೇ ನಮ್ಮ “ರಾಷ್ಟ್ರಪಿತ ಮಹಾತ್ಮ ಗಾಂಧಿ”

ಇಂದು ಹುತಾತ್ಮರ ದಿನ ಅಂದರೆ ಜನವರಿ 30 1948 ರಲ್ಲಿ ದೇಶ ಮಹಾತ್ಮನನ್ನು ಕಳೆದುಕೊಂಡಿದ್ದು, ಅಂದಿನಿಂದ ಜನವರಿ 30 ರಂದು ಹುತಾತ್ಮರ ದಿನಾಚರಣೆಯನ್ನು ಮಾಡುವುದರ ಮೂಲಕ ದೇಶಕ್ಕಾಗಿ ದುಡಿದ ಮಹಾತ್ಮನನ್ನು ಹಾಗೂ ಸ್ವತಂತ್ರಕ್ಕಾಗಿ ಹೋರಾಡಿದ ಮಹನೀಯರನ್ನು ನೆನೆದು ಸದಾ ಅವರ ಆತ್ಮಕ್ಕೆ ಶಾಂತಿಸಿಗಲೆಂದು ದೇವರಲ್ಲಿ ಪಾರ್ಥಿಸಲಾಗುತ್ತೆ.