ಬೆಂಗಳೂರು(ಜುಲೈ.30) ರಾಜ್ಯದ ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಮುಸ್ಲೀಮರ ಮೇಲಿನ ದ್ವೇಷದಿಂದಾಗಿ ಟಿಪ್ಪು ಜಯಂತಿಯನ್ನು ರದ್ದು ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದರು.

ಕಾಫೀ ಡೇ ಮಾಲೀಕ ಸಿದ್ದಾರ್ಥ್ ಅವರು ನಾಪತ್ತೆಯಾಗಿದ್ದ ಕಾರಣದಿಂದಾಗಿ ಎಸ್‌.ಎಂ.ಕೃಷ್ಣ ಮನೆಗೆ ಭೇಟಿ ನೀಡಿ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯನವರು, ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದು ಮಾಡಿ ದೊಡ್ಡ ಅಪರಾಧ ಮಾಡಿದೆ ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಅಲ್ಪಸಂಖ್ಯಾತರಿಗೆ ಸೇರಿದವರು ಎಂಬ ಕಾರಣಕ್ಕೆ ನಾವು ಟಿಪ್ಪು ಜಯಂತಿ ಆಚರಿಸುತ್ತಿರಲಿಲ್ಲ, ಆತ ಸ್ವಾತಂತ್ರ್ಯ ಹೋರಾಟಗಾರ, ಮೈಸೂರು ಸಂಸ್ಥಾನಕ್ಕೆ ಟಿಪ್ಪು ನೀಡಿದ ಕೊಡುಗೆ ಅಪಾರ, ಅದನ್ನು ಪರಿಗಣಿಸಿ ಟಿಪ್ಪು ಜಯಂತಿ ಆಚರಣೆ ನಾವು ಪ್ರಾರಂಭಿಸಿದ್ದೆವು ಎಂದು ಸಿದ್ದರಾಮಯ್ಯ ಹೇಳಿದರು.

ನೀರಾವರಿ ಯೋಜನೆ, ಶಸ್ತ್ರಾಸ್ತ್ರ ತಯಾರಿ, ಬ್ರಿಟೀಷರ ವಿರುದ್ಧ ಮಾಡಿದ ಹೋರಾಟ, ಆಡಳಿತದಲ್ಲಿ ತಂದ ಮಾರ್ಪಾಡುಗಳು ಇನ್ನೂ ಹಲವು ವಿಷಯಗಳನ್ನು ಪರಿಗಣಿಸಿ ಟಿಪ್ಪು ಜಯಂತಿ ಮಾಡುತ್ತಿದ್ದೆವು, ಆದರೆ ಸರ್ಕಾರವು ಟಿಪ್ಪು ಜಯಂತಿಯನ್ನು ರದ್ದು ಮಾಡಿದೆ. ನಾವಿದನ್ನು ಖಂಡಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.