ಬೆಂಗಳೂರು(ಜುಲೈ.11) ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರ ರಾಜೀನಾಮೆ ಬೆನ್ನಲ್ಲೇ ರಾಜ್ಯದ ಸಮ್ಮಿಶ್ರ ಸರ್ಕಾರದ ಫೈನಲ್‌ ಕೌಂಟ್‌ ಡೌನ್‌ ಶುರುವಾಗಿರುವ ಹಿನ್ನಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಇಂದಿನಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ವಿಧಾನಸೌಧದ ಸುತ್ತಮುತ್ತ ಪೊಲೀಸ್ ಕಮಿಷನರ್‌ ಅಲೋಕ್‌ ಕುಮಾರ್‌ ಅವರು ಇಂದಿನಿಂದ ಜುಲೈ 14 ರ ವರೆಗೆ ಸೆಕ್ಷನ್‌ 144 ಜಾರಿ ಮಾಡಿದ್ದಾರೆ. ಶಕ್ತಿಸೌಧದಲ್ಲಿ ಇಂದು ಬೆಳಗ್ಗೆ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ವಿಧಾನಸೌಧದ ಸುತ್ತಮುತ್ತ ಭದ್ರತೆಗೆ ನಿಯೋಜಿಸಲಾಗಿದೆ. ಹಲವು ಪೊಲೀಸರು ಮಫ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.