ಹಾಸನ(ಜೂ:20): ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಮತ್ತು ಕೆಪಿಟಿಸಿಎಲ್ ಅಧಿಕಾರಿ ಮತ್ತು ಸಿಬ್ಬಂದಿ ವೇತನ ಪರಿಷ್ಕರಣೆ ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಇಂಧನ ಸಚಿವನಾಗಿದ್ದಾಗ 10 ಕೋಟಿ ರೂ. ಲಂಚ ಕೊಡಲು ಬಂದಿದ್ದರು’ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಹಾಸನದ ಸಂತೆಪೇಟೆಯಲ್ಲಿರುವ ಕೆಪಿಟಿಸಿಎಲ್ ಕಚೇರಿ ಆವರಣದಲ್ಲಿ ನಡೆದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮುಖ್ಯ ಇಂಜಿನಿಯರ್ ಕಚೇರಿ ಹಾಗೂ ಕಾರ್ಯ ಮತ್ತು ಪಾಲನಾ ವಲಯ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ‘ಸಿಬ್ಬಂದಿ ಬೇಡಿಕೆ ಈಡೇರಿಸಿದೆ. ಆದರೆ, ಆ ಹಣ ಮುಟ್ಟದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಕೆಪಿಟಿಸಿಎಲ್ ನಿಗಮದ ನೌಕರರಿಗಾಗಿಯೇ ಪ್ರತ್ಯೇಕ ಚಿಕಿತ್ಸಾ ವಿಭಾಗ ನಿರ್ಮಾಣ ಮಾಡಿಸಿದೆ’ ಎಂದರು.

‘ಇಂಧನ ಸಚಿವನಾಗಿದ್ದಾಗ ಸ್ವಚ್ಛ ಆಡಳಿತ ನಡೆಸಿದರೂ ನನ್ನ ಮೇಲೆ ತನಿಖೆ ನಡೆಯಿತು. ಅಂದು ಇಂಧನ ಇಲಾಖೆಯಲ್ಲಿ ವಿಜಯನರಸಿಂಹ ಎಂಬ ಪ್ರಾಮಾಣಿಕ ಅಧಿಕಾರಿ ಇದ್ದರು. ಅವರ ಮೇಲೂ ಬಿಜೆಪಿ ಸರ್ಕಾರ ತನಿಖೆ ನಡೆಸಿತು. ಇದು ಕಳ್ಳರಿರುವ ದೇಶ. ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಗುರುತಿಸುವುದು ಕಡಿಮೆ ಎಂದು ತಿಳಿಸಿದರು.