ನವದೆಹಲಿ(ಜೂ,18): ಮಂಡ್ಯ ಲೋಕಸಭೆ ಚುನಾವಣೆ ದೇಶದ್ಯಾಂತ ಚರ್ಚೆಗೆ ಗ್ರಾಸವಾಗಿತ್ತು. ಒಂದು ಕಡೆ ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯಥಿ ಸುಮಲತಾ ಇಬ್ಬರ ನಡುವಿನ ರಾಜಕೀಯ ಗುದ್ದಾಟ ಎಲ್ಲರನ್ನು ಮಂಡ್ಯದತ್ತ ತಿರುಗಿ ನೋಡುವಂತೆ ಮಾಡಿತ್ತು. ಕೊನೆಗೂ ಸುಮಲತಾ ಬಹುಮತ ಪಡೆದು ದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಜನರಿಗೆ ಸುಮಲತಾ ಆನೇಕ ಭರವಸೆಗಳನ್ನು ನೀಡಿದ್ದರು ಈಗ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರದತ್ತ ಮಂಡ್ಯ ಸಂಸದೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಹೌದು ನನ್ನ ಕೈಯಲ್ಲಿ ಏನೂ ಇಲ್ಲ ಕೇವಲ ಸಂಸದರಿಂದ ಏನೂ ಮಾಡಲು ಸಾಧ್ಯವಿಲ್ಲ. ಎಲ್ಲವೂ ರಾಜ್ಯ ಸರ್ಕಾರದ ಕೈಯಲ್ಲಿದೆ ಎನ್ನುವ ಮೂಲಕ ಸಂಸದೆಯಾದ ಮೊದಲ ದಿನವೇ ಹೇಳಿದ್ದಾರೆ.

ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿದ ಸುಮಲತಾ, ಮೊದಲ ಬಾರಿಗೆ ಸಂಸದೆಯಾಗಿರುವುದರಿಂದ ಸಂಸತ್ ಕಲಾಪಗಳ ಪ್ರಕ್ರಿಯೆ ಅರಿತು ಕೆಲಸ ಮಾಡುತ್ತೇನೆ. ಬಿಜೆಪಿಗೆ ಬೆಂಬಲ ನನಗೆ ಸಕಾರಾತ್ಮಕವಾಗಿದ್ದು ಮಂಡ್ಯ ಕ್ಷೇತ್ರದ ಬೆಳವಣಿಗೆಗೆ ಅದು ಸಹಕಾರಿಯಾಗಲಿದೆ. ಕೇಂದ್ರ ಸಚಿವ ಸದಾನಂದಗೌಡರ ಜೊತೆ ಮಾತುಕತೆ ನಡೆಸಿದ್ದು ಅವರು ಜಿಲ್ಲೆಯ ಸಮಸ್ಯೆಗಳನ್ನು ಪಟ್ಟಿ ಮಾಡಿ ನೀಡುವಂತೆ ತಿಳಿಸಿದ್ದಾರೆ ಎಂದಿದ್ದಾರೆ

ಮಂಡ್ಯದ ಶಾಸಕರು ದ್ವೇಷದ ರಾಜಕೀಯ ಬಿಟ್ಟು ಮಂಡ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ಸಂಸದೆಯಾಗಿ ನಾನು ಕೇಂದ್ರದಿಂದ ಸಾಧ್ಯವಾಗುವ ಕೆಲಸಗಳನ್ನು ಮಾಡುತ್ತೇನೆ. ಅಲ್ಲದೆ ಕಾವೇರಿ ನದಿ ನೀರು ಹಂಚಿಕೆ ವಿಚಾರ ಕೋರ್ಟ್ ವ್ಯಾಪ್ತಿಯಲ್ಲಿ ಇರುವುದರಿಂದ ರಾಜ್ಯ ಸರ್ಕಾರವೇ ಇದರ ಹೊಣೆ ಹೊತ್ತುಕೊಳ್ಳಬೇಕು ಎಂದು ಹೇಳುವ ಮೂಲಕ ಸುಮಲತಾ ಅವರು ಜವಾಬ್ದಾರಿಯಿಂದ ಜಾರಿಕೊಂಡಿದ್ದಾರೆ. ಸಂಸತ್ ನನಗೆ ಹೊಸತು. ಸಂಸತ್ ಕಾರ್ಯ ವೈಖರಿ ತಿಳಿದುಕೊಂಡು ಕೆಲಸ ಮಾಡಬೇಕಿದೆ. ಬಿಜೆಪಿ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು ರಸ್ತೆ, ಕುಡಿಯುವ ನೀರಿನ ವಿಚಾರಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತೇನೆ. ಅಲ್ಲದೆ ಕಬ್ಬಿಗೆ ಬರಬೇಕಿರುವ ಬೆಂಬಲ ಬೆಲೆ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುತ್ತೇನೆ ಎಂದಿದ್ದಾರೆ.

ಒಟ್ಟಾರೆ ಚುನಾವಣಾ ಪ್ರಚಾರದ ವೇಳೆ ಜನರಿಗೆ ನೀಡಿದ ಮಾತುಗಳಿಗೂ ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಆಡಿದ ಮಾತುಗಳಿಗೂ ಭಾರೀ ವ್ಯತ್ಯಾಸ ಕಾಣುತ್ತಿದ್ದು ಸುಮಲತಾ ಸಂಸತ್‍ನಲ್ಲಿ ಮಂಡ್ಯ ಜನರ ಪರವಾಗಿ ನಿಲ್ಲುತ್ತಾರಾ ಎಂಬುದು ಕಾದು ನೋಡಬೇಕು.