ಶಿವಮೊಗ್ಗ(ಜೂ:27): ಮೋದಿಗೆ ಮತ ಹಾಕಿ ನನ್ನ ಬಳಿ ಕೆಲಸ ಮಾಡಿಸಿಕೊಡಿ ಎಂದು ಕೇಳಲು ಬರುತ್ತೀರಿ ಎಂಬ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿಯವರ ಮಾತು ಸರ್ವಾಧಿಕಾರಿ ಧೋರಣೆಯ ನಡೆ. ಇಂತಹ ವರ್ತನೆ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್‌. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಧಿಕಾರದ ಮದದಿಂದ ಅವರು ಇಂತಹ ಮಾತುಗಳನ್ನು ಆಡುತ್ತಿದ್ದಾರೆ. ಇದುವರೆಗೆ ಯಾವ ಮುಖ್ಯಮಂತ್ರಿಯೂ ಇಂತಹ ಮಾತುಗಳನ್ನು ಆಡಿರಲಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವ ಭಯ ಎದುರಾಗಿದೆ. ಈ ಭಯದಿಂದ ಮನಸ್ಸಿನ ಸ್ಥಿಮಿತ ಕಳೆದುಕೊಂಡು ವರ್ತಿಸುತ್ತಿದ್ದಾರೆ. ಸೋಲಿನ ಹತಾಶೆಯಿಂದ ಇಂತಹ ಮಾತುಗಳನ್ನು ಆಡುತ್ತಿದ್ದಾರೆ. ಜನ ಇದನ್ನೆಲ್ಲಾ ಗಮನಿಸುತ್ತಿದ್ದಾರೆ ಎಂದು ಹೇಳಿದರು.ಕೇವಲ 37 ಸ್ಥಾನ ಗೆದ್ದ ನೀವು ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದೀರಿ. ಜನರ ಋುಣ ತೀರಿಸಿ. ಅದನ್ನು ಬಿಟ್ಟು ಹೀಗೆಯೇ ಮಾತನಾಡಿದರೆ ಜನ ಬುದ್ಧಿ ಕಲಿಸುತ್ತಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್‌ ಮುಕ್ತ ಕರ್ನಾಟಕ ಆಗುವ ಸಾಧ್ಯತೆ ಇದೆ. ಈಗಲೇ ಅಪ್ಪ -ಮಕ್ಕಳ ಪಕ್ಷವಾದ ಜೆಡಿಎಸ್‌ ಎಲ್ಲಿದೆ ಎಂದು ಹುಡುಕಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದೆ, ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜನರ ಸಂಕಷ್ಟಗಳಿಗೆ ಧ್ವನಿಯಾಗುವುದು ಬಿಟ್ಟು ಗ್ರಾಮ ವಾಸ್ಯವ್ಯ ಎಂಬ ಹೆಸರಿನ ರಾಜಕೀಯ ದೊಂಬರಾಟವನ್ನು ಮುಖ್ಯಮಂತ್ರಿಗಳು ನಡೆಸುತ್ತಿದ್ದಾರೆ, ಒಂದು ಗ್ರಾಮಕ್ಕೆ ಹೋಗುವ ಬದಲು ನಾಲ್ಕಾರು ಗ್ರಾಮಗಳ ಜನರ ಬವಣೆಯನ್ನು ಕೇಳಿ ಪರಿಹರಿಸಲು ಯತ್ನಿಸಬೇಕು. ಜನರ ಗಮನ ಬೇರೆಡೆ ಸೆಳೆಯಲು ಗ್ರಾಮ ವಾಸ್ಯವ್ಯ ಮಾಡುತ್ತಿದ್ದಾರೆ ಎಂದು ದೂರಿದರು.