ಬೆಂಗಳೂರು(ಜೂನ್.08) ಸದ್ಯದ ದಿನಮಾನಗಳಲ್ಲಿ ಜ್ಞಾನಿಗಳು, ಅನುಭವ ಗಳಿಸಿದವರು ನನ್ನ ಜೊತೆ ಇತರರೂ ಬೆಳೆಯಲಿ ಎಂಬ ಆಶಯ ಹೊಂದಿರುವ ಮನಸ್ಸಿನವರ ಕೊರತೆ ಇದೆ. ಎಂದು ಹೇಳುವ ಮೂಲಕ ರಾಜೀನಾಮೆ ನೀಡಿದ್ದ ಡಿಸಿಪಿ ಅಣ್ಣಾಮಲೈ ಅವರ ರಾಜೀನಾಮೆಗೆ ಬೇರೆಯದ್ದೇ ಕಾರಣ ಇದೆ ಎಂಬುದನ್ನು ರವಿ.ಡಿ.ಚನ್ನಣ್ಣನವರು ಬಹಿರಂಗಪಡಿಸಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಡಿಸಿಪಿಯಾಗಿದ್ದ ಅಣ್ಣಾಮಲೈ ಅವರ ಹುಟ್ಟುಹಬ್ಬಕ್ಕೆ ನಗರದ ಪಶ್ಚಿಮ ವಿಭಾಗದ ಡಿಸಿಪಿಯಾದ ರವಿ.ಡಿ.ಚನ್ನಣ್ಣನವರು ಪತ್ರ ಬರೆಯುವ ಮೂಲಕ ಶುಭಾಶಯವನ್ನು ಕೋರಿದ್ದಾರೆ.

ರವಿ.ಡಿ.ಚೆನ್ನಣ್ಣನವರು ಬರೆದಿರುವ ಸಾಲುಗಳು ಹೀಗೆವೆ, ಸದ್ಯ ನಾವಿರುವ ಈ ಪ್ರಸ್ತುತದಲ್ಲಿ ಜ್ಞಾನಿಗಳಿಗೆ ಕೊರತೆಯಿಲ್ಲ, ಶ್ರೀಮಂತರಿಗೆ ಕೊರತೆ ಇಲ್ಲ, ವಿಷಯವನ್ನರಿತವರಿಗೆ ಕೊರತೆ ಇಲ್ಲ, ಎಲ್ಲವನ್ನೂ ಬಲ್ಲವರಿಗೂ ಕೊರತೆ ಇಲ್ಲ, ಆದರೆ ಅರ್ಜಿಸಿದ ಜ್ಞಾನ, ಪಡೆದ ತಿಳುವಳಿಕೆ, ಗಳಿಸಿದ ಅನುಭವಗಳನ್ನು ಸಮಾಜದ ಒಳಿತಿಗಾಗಿ ತಾನು ಬದುಕಿ ಇತರರೂ ಬದುಕಬೇಕೆಂಬ ಆಶಯ ಹೊತ್ತವರು, ನನ್ನ ಜೊತೆ ಇತರರೂ ಬೆಳೆಯಲಿ ಎಂಬ ಸದಾಶಯವನ್ನು ಹೊಂದಿರುವ ಮನಸ್ಸುಗಳ ಕೊರತೆ ಇದೆ. ನಾನು ಬೆಳೆಯದೇ ಹೋದರೂ ಪರವಾಗಿಲ್ಲ, ಇನ್ನೊಬ್ಬ ಬೆಳೆಯುತ್ತಿದ್ದಾನೆ, ಅವನನ್ನು ಅವನ ಪಾಡಿಗೆ ಬಿಟ್ಟು ಬಿಡೋಣ ಎಂಬ ಔದಾರ್ಯದ ಕೊರತೆ ಇದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಅಂದರೆ ಪೊಲೀಸ್ ಇಲಾಖೆಯಲ್ಲೇ ಇಂತಹ ಮನಸ್ಸುಗಳ ಕೊರತೆ ಇದೆ ಎಂದು ಪರೋಕ್ಷವಾಗಿ ತಮ್ಮ ಸ್ನೇಹಿತ ಅಣ್ಣಾಮಲೈಯವರಿಗೆ ರವಿ.ಡಿ.ಚೆನ್ನಣ್ಣನವರು ಹೇಳಿಕೊಂಡಿದ್ದಾರೆ.