ದುಬೈ(ಎ:2) : ಹೊಸ ಕುಟುಂಬ ವೀಸಾ ನೀತಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಅನುಮೋದನೆ ನೀಡಿದ್ದು, ಇದರಿಂದ ಲಕ್ಷಾಂತರ ಭಾರತೀಯರು ಪ್ರಯೋಜನ ಪಡೆಯಲಿದ್ದಾರೆ. ಹೊಸ ನೀತಿಯ ಅನ್ವಯ ವಿದೇಶಿ ಉದ್ಯೋಗಿಗಳು ಆದಾಯ ಮಾನದಂಡವನ್ನು ತಲುಪಿದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಪ್ರಾಯೋಜಿಸಬಹುದಾಗಿದೆ. ಯುಎಇ ಜನಸಂಖ್ಯೆಯಲ್ಲಿ ಅಧಿಕ ಪಾಲು ಹೊಂದಿರುವ ಭಾರತೀಯರಿಗೆ ಈ ನೂತನ ನೀತಿ ವರದಾನವಾಗಲಿದೆ. ಸುಮಾರು 33 ಲಕ್ಷ ಅನಿವಾಸಿ ಭಾರತೀಯರು ಯುಎಇನಲ್ಲಿ ವಾಸವಿದ್ದು, ಇದು ಯುಎಇ ಯ ಒಟ್ಟು ಜನಸಂಖ್ಯೆಯ ಶೇಕಡ 30ರಷ್ಟು ಎಂದು ಭಾರತೀಯ ದೂತವಾಸದ ಮೂಲಗಳು ತಿಳಿಸಿವೆ.

ವಿದೇಶಿ ಉದ್ಯೋಗಿಗಳು ಯುಎಇನಲ್ಲಿ ತಮ್ಮ ಕುಟುಂಬವನ್ನು ಪ್ರಾಯೋಜಿಸಲು ಆದಾಯ ಮಾತ್ರ ಅಗತ್ಯತೆಯಾಗಿರುತ್ತದೆ. ಈ ಮೊದಲು ಪಟ್ಟಿ ಮಾಡಲಾದ ವೃತ್ತಿಪರರಿಗಷ್ಟೇ ಈ ಸೌಲಭ್ಯ ಇತ್ತು. ಆದರೆ ಇದಕ್ಕೆ ತಿದ್ದುಪಡಿ ತಂದು ವಿದೇಶಿ ಉದ್ಯೋಗಿಗಳು ತಮ್ಮ ಕುಟುಂಬವನ್ನು ಪ್ರಾಯೋಜಿಸಲು ಕೇವಲ ಆದಾಯವನ್ನಷ್ಟೇ ಮಾನದಂಡವಾಗಿ ಪರಿಗಣಿಸಲು ನಿರ್ಧರಿಸಲಾಗಿದೆ ಎಂದು ಯುಎಇ ಸಚಿವ ಸಂಪುಟ ಪ್ರಕಟಿಸಿದೆ.
ಯುಎಇ ಪ್ರತಿಭೆಗಳ ಹಬ್ ಮತ್ತು ಅವಕಾಶಗಳ ನೆಲ ಎನ್ನುವುದನ್ನು ಸಚಿವ ಸಂಪುಟದ ಈ ನಿರ್ಧಾರ ಮತ್ತೆ ದೃಢಪಡಿಸಿದೆ.