ಪ್ರಜಾಪ್ರಭುತ್ವವೆಂದರೆ ಜನರಿಂದ ಜನರಿಗಾಗಿ ಜನರಿಗೊಸ್ಕರ ಇರುವ ವ್ಯವಸ್ಥೆ, ಇಂತಹ ವ್ಯವಸ್ಥೆ ಯನ್ನು ಒಪ್ಪಿಕೊಂಡಿರುವ ದೇಶಗಳಲ್ಲಿ ಜನರೇ ನೇರವಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿವಂತಹ ಹಕ್ಕನ್ನು ಹೊಂದಿರುತ್ತಾರೆ. ಇಂತಹ ಪ್ರಜಾಪ್ರಭುತ್ವದ ಅಂಗಗಳಾದ ಶಾಸಕಾಂಗ , ಕಾರ್ಯಾಂಗ, ನ್ಯಾಯಾಂಗ ನಂತರದ ಸ್ಥಾನವನ್ನು ಮಾಧ್ಯಮದ ಕ್ಷೇತ್ರವು ಪಡೆದುಕೊಂಡಿದೆ. ಈ ಮಾಧ್ಯಮ ವಲಯವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವೆಂತಲೂ ಕರೆಯಲಾಗುತ್ತದೆ. ಇಂತಹ ಮಾಧ್ಯಮ ಜನಸಾಮಾನ್ಯರ ಮನಸ್ಸಿನಲ್ಲಿ ನೈತಿಕವಾದ ಮೌಲ್ಯಗಳನ್ನು ಬಿತ್ತುವಂತಹ ಕಾರ್ಯ ನಿರ್ವಹಿಸಿಬೇಕು.

ಇವತ್ತಿನ ದಿನಗಳಲ್ಲಿ ಮನುಷ್ಯರು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಮತ್ತು ರಾಜಕಾರಣಿಗಳು ಸ್ವಾರ್ಥಿಗಳಾಗಿ ಪ್ರಜಾ ಸೇವೆ ಮಾಡುವುದನ್ನು ಬಿಟ್ಟು ಸ್ವಕಾರ್ಯ ಮಾಡಿಕೊಳ್ಳುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಜನರಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವಂತಹ ಮತ್ತು ಜನಪ್ರತಿನಿಧಿಗಳ ಮೋಸವನ್ನು ಪ್ರಶ್ನಿಸುವಂತಹ ಹಾಗೂ ಎಚ್ಚರಿಸುವಂತಹ ಕೆಲಸವನ್ನು ಮಾಡಬೇಕು.

ಮಾಧ್ಯಮಗಳು ಇಡೀ ಪ್ರಭುತ್ವವನ್ನೇ ಉರುಳಿಸುವಂತಹ ಶಕ್ತಿ ಸಾಮರ್ಥ್ಯವನ್ನು ಹೊಂದಿವೆ. ಇಂತಹ ಮಾಧ್ಯಮವು ಯಾವುದೇ ರಾಜಕಾರಣಿಗಳ ಬಂಡವಾಳ ಶಾಹಿಗಳ ಪರವಾಗಿ ಅಥವಾ ಒಂದು ಉದ್ಯಮವಾಗಿ ಕಾರ್ಯನಿರ್ವಹಿಸಬಾರದು. ಈ ರೀತಿ ಮಾಡಿದರೆ ಈಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಕೆಟ್ಟದಾಗಿ ಪರಿಣಾಮ ಬೀರುತ್ತದೆ. ಇದರಿಂದಾಗಿ ಹಲವು ಕ್ರಿಮಿನಲ್ಗಳು, ದೊಡ್ಡ ಉದ್ಯಮಿಗಳು ರಿಯಲ್ ಎಸ್ಟೇಟ್ ಮಾಲೀಕರುಗಳು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ. ಇಂತಹ ಸ್ಥಿತಿ ಪ್ರಜಾಪ್ರಭುತ್ವ ದೇಶದ ದೊಡ್ಡ ದುರಂತವಾಗಿ ಪರಿಣಮಿಸುತ್ತದೆ.

ಸಮಾಜದಲ್ಲಿರುವ ಜನರು ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ಬರುವ ಸುದ್ಧಿಗಳನ್ನು ಸತ್ಯಕ್ಕೆ ಹತ್ತಿರವಾಗಿರುವಂತೆ ಎಂದು ನಂಬುತ್ತಾರೆ. ಅಲ್ಲದೆ ಮಾಧ್ಯಮದ ಮೇಲೆ ಅತ್ಯಂತ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಇವರ ಈ ನಂಬಿಕೆಗಳಿಗೆ ದ್ರೋಹ ಬಗೆಯದಂತೆ ಮಾಧ್ಯಮ ಪ್ರಜಾಪ್ರಭುತ್ವವನ್ನು ರಕ್ಷಿಸುವಂಹ ಕಾರ್ಯ ನಿರ್ವಹಿಸಬೇಕು.

ನಮ್ಮ ಈ ಸಮಾಜದಲ್ಲಿ ಹಲವಾರು ಧರ್ಮಗಳಿವೆ ಇದರ ಜೊತೆಗೆ ಹಲವಾರು ಜನರು ಮತೀಯವಾದಿಗಳು ಮತ್ತು ಮೂಲಭೂತವಾದಿಗಳು ಸಮಾಜದಲ್ಲಿ ಅಶಾಂತಿ ಉಂಟುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂತಹವರಿಗೆ ಪೂರಕವಾಗಿ ಮಾಧ್ಯಮಗಳು ಸುದ್ಧಿಗಳನ್ನು ಕೋಮುವಾದ ಸೃಷ್ಟಿಸುವಂತೆ ಪ್ರಸಾರ ಮಾಡಬಾರದು ಧರ್ಮಗಳ ಕುರಿತಾದ ವಿಷಯಗಳಲ್ಲಿ ಸುದ್ದಿಗಳನ್ನು ಎಚ್ಚರಿಕೆಯಿಂದ ಬಿತ್ತರಿಸಬೇಕು.

ಜಾತಿ ಧರ್ಮ, ಮತ ಲಿಂಗ ತಾರತಮ್ಯ ಮಾಡುವಂತವರ ವಿರುದ್ಧ ಮಾಧ್ಯಮಗಳು ವರದಿ ಮಾಡಬೇಕು. ಧರ್ಮ ಧರ್ಮಗಳ ನಡುವೆ ಸೇತುವೆಯಾಗಿ ಮಾಧ್ಯಮಗಳು ಕಾರ್ಯನಿರ್ವಹಿಸಬೇಕು. ಒಟ್ಟಾರೆಯಾಗಿ ಮಾಧ್ಯಮಗಳು ಪ್ರಜಾಪ್ರಭುತ್ವದ ಕಣ್ಣಾಗಿ ಕೆಲಸ ಮಾಡಬೇಕು.

ರಚನೆ: ಕಾವೇರಿದಾಸ್