ಬೆಂಗಳೂರು(ಜೂ:10): ಪದೇ ಪದೇ ಸಮ್ಮಿಶ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕ ರೋಷನ್ ಬೇಗ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.ಲೋಕಸಭಾ ಚುನಾವಣೆಯ ನಂತರ ಸಮ್ಮಿಶ್ರ ಸರ್ಕಾರದ ವಿರುದ್ಧ ತಿರುಗಿಬಿದ್ದ ರೋಷನ್ ಬೇಗ್ ಸರ್ಕಾರದ ಹಾಗೂ ಪಕ್ಷದ ಕಾರ್ಯವೈಖರ್ಯದ ಬಗ್ಗೆ ಟೀಕೆಗಳನ್ನು ವ್ಯಕ್ತಪಡಿಸಿದ್ದರು, ಅಷ್ಟೇ ಅಲ್ಲದೇ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು.

ಈ ಹಿನ್ನಲೆಯಲ್ಲಿ ರೋಷನ್ ಬೇಗ್ ಗೆ ಕೆಪಿಸಿಸಿ ನೋಟಿಸ್‍ ನೀಡಿದ್ದರೂ ಕೂಡ ಅದಕ್ಕೆ ಉತ್ತರ ನೀಡಿರಲಿಲಲ್ಲ. ಬೇಗ್ ಅವರು ಎಐಸಿಸಿ ಸದಸ್ಯರು ಕೂಡ ಆಗಿರುವುದರಿಂದ ಎಐಸಿಸಿಯೇ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಬ್ಬರು ಸೇರಿ ದಾಖಲೆ ಸಹಿತ ಹೈಕಾಮಾಂಡ್ ಗೆ ದೂರು ನೀಡಿದ್ದಾರೆ ಎಂದು ಮೂಲಗಳಿದ ತಿಳಿದುಬಂದಿದೆ.