ಬೆಂಗಳೂರು(ಮೇ:30): ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಉರುಳಿಸಿ ತುರ್ತಾಗಿ ಅಧಿಕಾರ ಹಿಡಿಯಲು ಗ್ರೀನ್ ಸಿಗ್ನಲ್ ನೀಡಬೇಕು.ಇಲ್ಲದಿದ್ದರೆ ಪರಿಸ್ಥಿತಿ ನಮಗೇ ಉಲ್ಟಾ ಹೊಡೆಯಬಹುದು ಎಂದು ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಒಕ್ಕೊರಲಿನಿಂದ ಪಕ್ಷದ ವರಿಷ್ಟರನ್ನು ಒತ್ತಾಯಿಸಿದ್ದಾರೆ. ನರೇಂದ್ರಮೋದಿ ಅವರು ಇಂದು ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿಗೆ ತೆರಳಿರುವ ಬಿಜೆಪಿ ನಾಯಕರು,ವರಿಷ್ಟರ ಜತೆ ಮಾತುಕತೆ ನಡೆಸಿದ್ದು, ಸರ್ಕಾರ ಬೀಳಿಸಿ,ರಾಷ್ಟ್ರಪತಿ ಆಳ್ವಿಕೆ ಹೇರುವುದು ಡೇಂಜರ್.ಹೀಗಾಗಿ ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿ ಅಧಿಕಾರ ಹಿಡಿಯಲು ಅವಕಾಶ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಭಾರೀ ಗೆಲುವಿನ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ತಾನಾಗಿಯೇ ಬೀಳುವವರೆಗೆ ಸುಮ್ಮನಿರೋಣ. ಅದು ಬಿದ್ದ ಮೇಲೆ ಕರ್ನಾಟಕದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಿ ಮಧ್ಯಂತರ ಚುನಾವಣೆಗೆ ಸಿದ್ಧರಾಗೋಣ. ರಾಜಸ್ತಾನ ಹಾಗೂ ಮಧ್ಯಪ್ರದೇಶದ ಸರ್ಕಾರಗಳೂ ಬೀಳುವ ಸ್ಥಿತಿಯಲ್ಲಿವೆ ಹೀಗಾಗಿ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಮಧ್ಯಂತರ ಚುನಾವಣೆಗೆ ಹೋಗೋಣ, ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರೋಣ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಅವರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದರು.

ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತೈದು ಸ್ಥಾನಗಳನ್ನು ಗೆದ್ದಿರುವುದರಿಂದ ಮಧ್ಯಂತರ ಚುನಾವಣೆಯಲ್ಲಿ ರಾಜ್ಯದ ಇನ್ನೂರಾ ಇಪ್ಪತ್ನಾಲ್ಕು ಸೀಟುಗಳ ಪೈಕಿ ನೂರಾ ಅರವತ್ತು ಸೀಟುಗಳನ್ನು ಗೆಲ್ಲಬಹುದು ಎಂಬುದು ಅಮಿತ್‍ಷಾ ಅವರ ವಾದವಾಗಿದೆ. ಚುನಾವಣೆಯ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಅಮಿತ್ ಷಾ ಅವರ ಮಾತಿಗೆ ಎದುರಾಡದ ಬಿಜೆಪಿ ನಾಯಕರೀಗ ಒಮ್ಮೆಲೇ ಧ್ವನಿ ಬದಲಿಸಿದ್ದು,ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಯಡಿಯೂರಪ್ಪ ನೇತೃತ್ವದಲ್ಲಿ ಪರ್ಯಾಯ ಸರ್ಕಾರ ರಚನೆಯಾಗುವಂತೆ ನೋಡಿಕೊಳ್ಳುವುದೇ ಸೂಕ್ತ ಎಂದು ವರಿಷ್ಟರಿಗೆ ಹೇಳತೊಡಗಿದ್ದಾರೆ.