ಶಿವಮೊಗ್ಗ(ಜೂ:22): ಶರಾವತಿ ಹಿನ್ನೀರನ್ನು ಬೆಂಗಳೂರಿಗೆ ತರುವ ಯೋಜನೆಗೆ ಸರ್ಕಾರ ಮುಂದಾಗಿದೆ. ಶಿವಮೊಗ್ಗದಲ್ಲಿಯೇ ಭೀಕರ ಬರ ಆವರಿಸಿದ್ದು, ಈ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಒತ್ತಾಯಿಸಿದರು.

ಸರ್ಕಾರದ ನಿರ್ಣಯ ಬಗ್ಗೆ ಮಾತನಾಡಿದ ಅವರು, ರಾಜಧಾನಿಯಲ್ಲಿನ ಬರ ನೀಗಿಸಲು ಶರಾವತಿ ನೀರನ್ನು ಬೆಂಗಳೂರಿಗೆ ತರಲು ಯೋಜನೆ ರೂಪಿಸಲು ಸರ್ಕಾರ ಮುಂದಾಗಿರುವುದು ಅತ್ಯಂತ ಖಂಡನೀಯ ವಿಚಾರ. ಪರಿಸರ ಉಳಿಸುವ ಯೋಜನೆ ರೂಪಿಸುವುದನ್ನು ಬಿಟ್ಟು, ಈ ರೀತಿಯ ಯೋಜನೆ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.

ನದಿ ಮೂಲಗಳು ತಿರುಚುವುದರಿಂದ ಅದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈಗಾಗಲೇ ಶಿವಮೊಗ್ಗದ ಜನರು ಬರಗಾಲವನ್ನು ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಕ್ಷೀಣವಾಗಿದ್ದು, ಶೇ.70ರಷ್ಟು ಮಳೆ ಕೊರತೆ ಎದುರಿಸುತ್ತಿದ್ದೇವೆ. ಇಂತಹ ಶೋಚನಿಯ ಸ್ಥಿತಿಯಲ್ಲಿ ಶರಾವತಿ ನೀರನ್ನು ರಾಜಧಾನಿಗೆ ತರುವ ನಿರ್ಧಾರ ಸರಿಯಲ್ಲ.

ಬರಗಾಲ ಸಮಸ್ಯೆಗೆ ಸರ್ಕಾರವನ್ನೇ ನಂಬಿಕೊಂಡು ಕೂರುವ ಬದಲು, ಜನರು ನೀರನ್ನು ಕಡಿಮೆ ಬಳಸುವ ಮೂಲಕ, ಸರ್ಕಾರಗಳ ಜೊತೆ ಕೈಜೋಡಿಸಬೇಕೆಂದು ಜನತೆಗೆ ಮನವಿ ಮಾಡಿದರು.