ಬೆಂಗಳೂರು(ಜು:13): ವಿಶ್ವನಾಥ್ ಅವರು ಬಿಜೆಪಿಗೆ ಸೇರುವುದು ಖಚಿತ ಎಂಬ ಮಾತು ಒಂದೆಡೆ ಕೇಳಿ ಬರುತ್ತಿದ್ದರೆ, ಅವರ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಮತ್ತೆ ವಿಶ್ವನಾಥ್ ಸ್ಪರ್ಧಿಸುತ್ತಾರೋ ಅಥವಾ ತಮ್ಮ ಪುತ್ರನನ್ನು ಕಣಕ್ಕಿಳಿಸುತ್ತಾರೋ ಎಂಬ ಕುತೂಹಲದ ಚರ್ಚೆಯೂ ನಡೆಯುತ್ತಿದೆ. ಆದರೆ ಯಾರೇ ಸ್ಪರ್ಧಿಸಿದರೂ ಗೆಲುವು ಅಷ್ಟು ಸುಲಭವಲ್ಲ ಎಂಬುದೂ ಜನರ ಅಭಿಪ್ರಾಯವಾಗಿದೆ.

ಈಗಾಗಲೇ ಅತೃಪ್ತ ಶಾಸಕರ ನಾಯಕ ಎನಿಸಿಕೊಂಡ ವಿಶ್ವನಾಥ್ ಅವರನ್ನು ಸೋಲಿಸಲು ಜೆಡಿಎಸ್ ರಾಜಕೀಯ ದಾಳ ಉರುಳಿಸುವುದಂತೂ ನಿಜ. ವಿಶ್ವನಾಥ್ ಅವರಿಗೆ ಇದು ಉಪಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ ಬಿಜೆಪಿ ವರಿಷ್ಠರು ನೇರವಾಗಿ ಅಖಾಡಕ್ಕಿಳಿದು ಪ್ರಚಾರದಲ್ಲಿ ಪಾಲ್ಗೊಂಡರೆ ಸವಾಲಿನೊಂದಿಗೆ ವಿಶ್ವನಾಥ್ ಅವರು ಗೆಲುವಿನ ದಡ ಸೇರುವ ಸಂಭವ ತಳ್ಳಿಹಾಕುವಂತಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕೆಲವೇ ಸಾವಿರ ಅಂತರದಲ್ಲಿ ವಿಶ್ವನಾಥ್ ಅವರು ಗೆಲವು ಸಾಧಿಸಿದ್ದರು. ಮತ್ತೊಂದು ಮೂಲಗಳ ಪ್ರಕಾರ, ವಿಶ್ವನಾಥ್ ಮತ್ತೆ ಹುಣಸೂರಿನಿಂದ ಸ್ಪರ್ಧಿಸುವುದು ಅನುಮಾನವಾಗಿದ್ದು, ಅವರ ಬದಲಿಗೆ ಅವರ ಪುತ್ರ ಜಿಲ್ಲಾ ಪಂಚಾಯಿತಿ ಸದಸ್ಯ ಅಮಿತ್ ಅವರನ್ನೇ ಕಣಕ್ಕಿಳಿಸಬಹುದು ಎಂಬ ಮಾತು ಕೇಳಿಬರುತ್ತಿವೆ.