ತಿರುವನಂತಪುರ:(ಫೆ18): ಕಾಸರಗೋಡಿನಲ್ಲಿ ಯುವ ಕಾಂಗ್ರೇಸ್ ಕಾರ್ಯಕರ್ತರ ಕೊಲೆಯಾಗಿದ್ದು, ಕೇರಳ ರಾಜ್ಯಾದ್ಯಂತ ಬಂದ್‍ಗೆ ಕರೆ ನೀಡಲಾಗಿದ್ದು, ಕಾಸರಗೋಡು ಜಿಲ್ಲೆಯಾದ್ಯಂತ ಬಸ್ ಸಂಚಾರ ಸ್ಥಗಿತಗೊಂಡಿದೆ.

ಕಾಸರಗೋಡು ಜಲ್ಲೆಯ ಪೆರಿಯದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಕೊಲೆಯಾದವರು ಕೃಪೇಶ್(21), ಶರತ್ ಲಾಲ್(24), ಇವರು ಕಾಂಗ್ರೇಸ್‍ನ ಕಾರ್ಯಕರ್ತರು ಎಂದು ತಿಳಿದು ಬಂದಿದೆ. ಇವರಿಬ್ಬರು ಮೋಟಾರ್ ಸೈಕಲ್‍ನಲ್ಲಿ ತೆರಳುವಾಗ ಅಪರಿಚಿತರು ಬಂದು ದಾಳಿ ನಡೆಸಿದ್ದಾರೆ.

ಕೆಲವು ದಿನಗಳಿಂದ ಸಿಪಿಐ(ಎಂ) ಮತ್ತು ಕಾಂಗ್ರೇಸ್ ಕಾರ್ಯಕರ್ತರ ನಡುವೆ ಜಗಳ ತಿಕ್ಕಾಟಗಳು ನಡೆಯುತ್ತಿದ್ದು, ಸಿಪಿಐ(ಎಂ) ಕಾರ್ಯಕರ್ತರು ದಾಳಿಗೆ ಪ್ರಮುಖ ಸೂತ್ರಧಾರಿಗಳಾಗಿದ್ದು, ರಾಜಕೀಯ ವಿರೋಧಿಗಳನ್ನು ಮೌನವಾಗಿಸುವ ತಂತ್ರ ಎಂದು ಕೇರಳದ ಕಾಂಗ್ರೇಸ್ ಮುಖ್ಯಸ್ಥ ಮುಲ್ಲಪಲ್ಲಿ ರಾಮಚಂದ್ರನ್ ಹೇಳಿದ್ದಾರೆ. ಇನ್ನು ಕೊಲೆಯನ್ನು ಖಂಡಿಸಿ ಕೇರಳ ರಾಜ್ಯಾದ್ಯಂತ ಕಾಂಗ್ರೇಸ್ ಪಕ್ಷ ಬಂದ್‍ಗೆ ಕರೆಯನ್ನು ನೀಡಿದೆ.