ನವದೆಹಲಿ(ಫೆ:01):45 ವರ್ಷಗಳಲ್ಲೇ ಅತಿ ಹೆಚ್ಚು ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗಿದೆ. 2017-18ನೇ ಹಣಕಾಸು ವರ್ಷದಲ್ಲಿ ನಿರುದ್ಯೋಗದ ಪ್ರಮಾಣ ಶೇ. 6.1 ರಷ್ಟಿತ್ತು ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್‌ಎಸ್‌ಎಸ್‌ಒ) ವರದಿ ಮಾಡಿದೆ. 2016ರ ನವೆಂಬರ್ ನಲ್ಲಿ ನೋಟು ರದ್ದು ಮಾಡಿದ ನಂತರ ಮೊದಲ ಉದ್ಯೋಗ ಸಮೀಕ್ಷೆ ಇದಾಗಿದೆ.

ನೋಟು ರದ್ದತಿ ನಂತರ ದೇಶದಲ್ಲಿ 45 ವರ್ಷಗಳಲ್ಲೇ ಅತೀ ಹೆಚ್ಚಿನ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗಿರುವ ವರದಿಯನ್ನು ಪರಿಶೀಲನೆ ಮಾಡಿಲ್ಲ ಎಂದು ನೀತಿ ಆಯೋಗ ತಿಳಿಸಿದೆ. ನಿರುದ್ಯೋಗದ ಸೃಷ್ಟಿ ವರದಿಯಿಂದಾಗಿ ಮೋದಿ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿದ್ದು, ಈ ವಿಷಯವನ್ನು ಎತ್ತಿ ಹಿಡಿದಿರುವ ರಾಜಕೀಯ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.

1972-73ರ ಸಾಲಿನಲ್ಲಿ ನಿರುದ್ಯೋಗ ಪ್ರಮಾನ ಹೆಚ್ಚಿತ್ತು. ತದನಂತರದಲ್ಲಿ ಮೋದಿ ಸರ್ಕಾರದಲ್ಲೇ ಹೆಚ್ಚು ನಿರುದ್ಯೋಗ ಸೃಷ್ಟಿಯಾಗಿದೆ. 2011-12ರ ಸಾಲಿನ ಯುಪಿಎ ಸರ್ಕಾರದ ಅಧಿಕಾರದಲ್ಲಿದ್ದಾಗ ನಿರುದ್ಯೋಗದ ದರ ಕೇವಲ ಶೇ. 2.2ರಷ್ಟು ಇತ್ತು ಎನ್ನಲಾಗಿದೆ. ಕಳೆದ ವರ್ಷಕ್ಕೆ ಹಾಗೂ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿಕೊಂಡರೆ ಯುವಕರಲ್ಲಿ ನಿರುದ್ಯೋಗ ಸಂಖ್ಯೆ ತುಂಬಾ ಹೆಚ್ಚಾಗಿದೆ ಎಂದು ಸಮೀಕ್ಷೆ ವರದಿಯಲ್ಲಿ ಹೇಳಿದೆ.