ಭಾರತದ ಸಾಮಾಜಿಕ ರಚನೆಯು ಜಾತಿಗಳಿಂದ ರಚಿತವಾಗಿದ್ದು ಈ ದೇಶದಲ್ಲಿ ಜಾತಿ ತಾರತಮ್ಯವು ಸಾಮಾಜಿಕ ನೀತಿಯಾಗಿ ಬೇರೂರಿಬಿಟ್ಟಿದೆ. ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದಿನಿಂದಲೇ ಈ ದೇಶವನ್ನು ಜಾತಿಗಳಾಗಿ ವಿಭಜನೆ ಮಾಡಲಾಯಿತು. ಇವತ್ತಿಗೆ ಪ್ರತಿಯೊಬ್ಬ ಮನುಷ್ಯನನ್ನು ಜಾತಿಯಿಂದಲೇ ಗುರುತಿಸಲಾಗುತ್ತಿದೆ. ಮೇಲು ಕೀಳು ಎಂಬ ತಾರತಮ್ಯದಿಂದ ಕೂಡಿರುವ ಜಾತಿ ವ್ಯವಸ್ಥೆಯು ಇಲ್ಲಿನ ಅಸ್ಪೃಶ್ಯ ಸಮುದಾಯಗಳನ್ನು ಸಮಾಜ ಎಲ್ಲ ಅವಕಾಶಗಳಿಂದ ಹೊರಗಿಡುತ್ತಾ ಬಂದಿದೆ.

ಕುಲಕಸುಬಿನ ಆಧಾರದ ಮೇಲೆ ಜಾತಿಗಳು ಹುಟ್ಟಿದರೂ ಕಾಲ ನಂತರ ಪುರೊಹಿತಶಾಹಿ ಮತ್ತು ಉಳಿಗಮಾನ್ಯ ವ್ಯವಸ್ಥೆಗಳ ಮೈತ್ರಿಯಿಂದ ಜನ್ಮತಾಳಿದ ವರ್ಣವ್ಯವಸ್ಥೆಯು ಜಾತಿಗಳಲ್ಲಿ ಮೇಲ್ಜಾತಿ ಮತ್ತು ಕೆಳಜಾತಿಗಳೆಂಬ ಏಣಿಶ್ರೇಣಿಯನ್ನು ನಿರ್ಮಿಸಲಾಯಿತು.

ಈ ವರ್ಣವ್ಯವಸ್ಥೆಯು ಜಾತಿಗಳಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಾನಮಾನಗಳನ್ನು ನಿರ್ಧರಿಸಿದಲ್ಲದೇ ತಾರತ್ಯಮ ಸಮಾಜ ಕಟ್ಟಲು ಮುಂದಾಯಿತು. ಹೀಗೆ ನಿರ್ಮಿಸಲ್ಪಟ್ಟ ಹಾಗೂ ಹೇರಲ್ಪಟ್ಟ ವಿಭಜಿತ ಜಾತಿ ತಾರತ್ಯಮ ನಿಧಾನವಾಗಿ ಸಾಮಾಜಿಕ ಮೌಲ್ಯವಾಗಿ ಸಮಾಜದಲ್ಲಿ ರೂಪುಗೊಂಡಿದಲ್ಲದೇ ಇಲ್ಲಿನ ಅಸ್ಪೃಶ್ಯ ಸಮುದಾಯಗಳನ್ನು ಸಂಪೂರ್ಣವಾಗಿ ಸಮಾಜದಿಂದ ಹೊರಗಿಡುತ್ತಾ ಬಂದಿದೆ.

ತದನಂತರ ಭಾರತವನ್ನು ಶತಮಾನಗಟ್ಟಲೇ ಆಳ್ವಿಕೆ ನಡೆಸಿದ ಬ್ರಿಟಿಷರು ಕೂಡ ಇಲ್ಲಿರುವ ಪುರೋಹಿತಸಾಹಿ ಮತ್ತು ಪಾಳೇಗಾರರ ಮೈತ್ರಿಗೊಂಡೇ ತಮ್ಮ ದರ್ಬಾರು ನಡೆಸಿದ್ದರು. ಇವರು ಇಲ್ಲಿನ ತಳಸಮುದಾಯಗಳಿಗೆ ಶಿಕ್ಷಣ ಮತ್ತು ಕಾನೂನು ಮತ್ತು ಯೋಜನಗೆಳಗಳನ್ನು ಜಾರಿ ತಂದರು. ಇವುಗಳು ತಾರತಮ್ಯದ ಜಾತಿವ್ಯವಸ್ಥೆಯನ್ನು ತೀರ ಒಳಹೊಕ್ಕಿ ಏನು ಬದಲಾವಣೆಯನ್ನು ಮಾಡಲಿಲ್ಲ.

ಮುಂದೆ ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು ನಂತರ ಭಾರತವನ್ನು ಗಣರಾಜ್ಯ ಮಾಡಿಕೊಂಡು ಸಂವಿಧಾನವನ್ನು ರೂಪಿಸಿಕೊಳ್ಳಲಾಯಿತು. ಪ್ರಜಾಪ್ರಭುತ್ವದ ಆಶಯಗಳನ್ನು ಹೊತ್ತ ಸಂವಿಧಾನದಿಂದಾಗಿ ಅದುವರೆಗೂ ಸಮಾಜದಿಂದ ಹೊರಗಿಡಲ್ಪಟ್ಟ ತಳ ಸಮುದಾಯಗಳನ್ನು ತದನಂತರ ಸಮಾಜದೊಳಗೆ ಒಳಗೊಳ್ಳಿಸಿಕೊಳ್ಳಲಾಯಿತು. ನಂತರ ತಳ ಸಮುದಾಯಗಳನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಮುನ್ಸೂಣಿಗೆ ತರುವ ಉದ್ಧೇಶದಿಂದ ಹಲವಾರು ಅವಕಾಶಗಳನ್ನು, ಯೋಜನೆಗಳನ್ನು ಮತ್ತು ಸೌಲಭ್ಯಗಳನ್ನು ಕಲ್ಪಿಸಲಾಯಿತು. ಇವುಗಳು ತಳ ಸಮುದಾಯಗಳನ್ನು ಅಭಿವೃದ್ಧಿಗೊಳಿಸುವಂತ ಕಾರ್ಯಗಳಾದರೂ ಇಲ್ಲಿಯವರೆಗೆ ಕುಲಕಸುಬಗಳನ್ನೇ ನಂಬಿಕೊಂಡು ಬದುಕುತ್ತಿರುವ ಸಮುದಾಯಗಳನ್ನು ಸಂಪೂರ್ಣವಾಗಿ ತಲುಪದೆ ಇರುವುದು ದುರಂತಕರವಾದ ಸಂಗತಿಯಾಗಿದೆ. ಇಂದಿಗೂ ಸರ್ಕಾರಗಳ ಯೋಜನೆಗಳಾಗಲಿ, ಸವಲತ್ತುಗಳಾಗಲಿ ಹಲವಾರು ಸಮುದಾಯಗಳ ಜನರನ್ನು ತಲುಪದೆ ಇರುವುದು ಜೀವಾಂತ ಸತ್ಯವಾಗಿದೆ.

ಅಭಿವೃದ್ಧಿ ಪಥದಲ್ಲಿ ಓಡುತ್ತಿರುವ ಈ ದೇಶದಲ್ಲಿ ಇವತ್ತಿಗೂ ಇಲ್ಲಿನ ತಳ ಸಮುದಾಯಗಳಿಗೆ ಸಮಾಜದಲ್ಲಿ ಘನತೆಯಾಗಲಿ ಮತ್ತು ಕಸುಬಿಗೆ ಮಾನ್ಯತೆಯಾಗಲಿ ಸಿಕ್ಕಿಲ್ಲ.

ಒಂದು ಕಡೆ ಹಿಂದಿನಿಂದಲೂ ತಮ್ಮ ಕುಲಕಸುಬನ್ನೇ ನಂಬಿ ಜೀವನ ಸಾಗಿಸುತ್ತಿದ್ದ ನೂರಾರು ಕುಶಲಕರ್ಮಿ ಜಾತಿಗಳು ಇವತ್ತಿಗೆ ಪರಂಪರಿಕವಾದ ಕಸುಬನ್ನು ಬಿಟ್ಟು ಬೇರೆ ಬೇರೆ ವೃತ್ತಿಗಳನ್ನು ಮಾಡುತ್ತ ಬದುಕುತ್ತಿದ್ದಾರೆ . ಇನ್ನೊಂದು ಕಡೆ ತಮ್ಮ ಕಸುಬಗಳನ್ನೇ ನಂಬಿಕೊಂಡು ಬೇರೆ ಕೆಲಸಗಳನ್ನು ಮಾಡಲಾಗದೆ ಬದುಕುತ್ತಿರುವ ಹಲವಾರು ಕುಶಲಕರ್ಮಿಗಳು ನಗರಗಳಿಗೆ ವಲಸೆ ಹೋಗಿ ತಮ್ಮ ಕಸುಬನ್ನು ಮಾಡುತ್ತಾ ಶೋಚನೀಯವಾಗಿ ಬದಕನ್ನು ನಡೆಸುತ್ತಿದ್ದಾರೆ.

ಯಾಂತ್ರೀಕರಣಗೊಂಡಿರುವ ಬೆಂಗಳೂರು ನಗರಕ್ಕೆ ಕುಲ ಕಸುಬನ್ನೆ ನಂಬಿ ಬಂದ ಚಮ್ಮಾರರು, ಕ್ಷೌರಿಕರು, ಕುಂಬಾರರು, ಮೇದಾರರು, ಅಗಸರು ಇನ್ನಿತರೆ ಸಮುದಾಯಗಳು ಈ ಮಾಡರ್ನ್‌ ಸಿಟಿಯಲ್ಲಿ ಪ್ರತಿದಿನ ಅನೇಕ ಸವಾಲು ಮತ್ತು ಸಮಸ್ಯೆಗಳಿಂದ ಜೀವನ ಸವೆಸುತ್ತಿವೆ. ಹಳ್ಳಿಗಳಿಂದ ದೂಡಲಾದ ಮತ್ತು ಸಿಟಿಯಲ್ಲಿ ಜೀವನ ಕಟ್ಟಿಕೊಳ್ಳ ಬಹುದೆಂಬ ನಿರೀಕ್ಷೆಯಿಂದ ಬಂದ ಈ ಸಮುದಾಯಗಳ ಜನರು ಇಲ್ಲಿನ ಯಾಂತ್ರೀಕರಣ ಮತ್ತು ಅಭಿವೃದ್ಧಿಯೊಂದಿಗೆ ಸ್ಪರ್ಧಿಸಲಾಗದೆ ಮೂಲೆಗುಂಪಾಗಿ ಮತ್ತೆ ತಮ್ಮ ಮೂಲ ನೆಲೆಗಳಿಗೆ ಹೋಗಲಾರದೆ ಇಲ್ಲಿಯೂ ಬದುಕಲಾದರೆ ಸಂದಿಗ್ಧ ಸ್ಥಿತಿಯಲ್ಲಿ ನರಳಾಡುತ್ತಿವೆ.

ಇಂತಹದೇ ನರಳಾಟದಲ್ಲಿ ಬೆಂಗಳೂರಿನಲ್ಲಿರುವ ಚಾಮರಾಜಪೇಟೆಯ ರಸ್ತೆಯೊಂದರ ಫುಟ್ಪಾತ್ ನಲ್ಲಿ ಪುಟ್ಟದಾದ ಶೆಡ್ ಗಳನ್ನು ಕಟ್ಟಿಕೊಂಡು ಜೀವನ ಸವೆಸುತ್ತಿರುವ ಮೇದಾರ ಸಮುದಾಯವನ್ನು ಕಾಣಬಹುದು.

ದೊಡ್ಡ ತಿಮಿಂಗಿಲ ಸಣ್ಣ ಮೀನುಗಳನ್ನು ತಿನ್ನುವಂತೆ ಅಭಿವೃದ್ಧಿ ಮತ್ತು ಬೃಹತ್ ಕೈಗಾರಿಕೆಗಳು ಭಾರತದಲ್ಲಿದ್ದ ಗುಡಿ ಕೈಗಾರಿಕೆಗಳನ್ನು ಮತ್ತು ಕುಶಲಕರ್ಮಿಗಳನ್ನು ಅವನತಿಗೊಳ್ಳಿಸಿದರೂ ಇಂದಿಗೂ ತಮ್ಮ ಕುಲ ವೃತ್ತಿಯನ್ನೇ ನಂಬಿಕೊಂಡು ಈ ಮೇದಾರರು ಬೆಂಗಳೂರಿನಲ್ಲಿ ಬದುಕ ನಡೆಸುತ್ತಿದ್ದಾರೆ.

ಸಮಾಜದಿಂದ ಹೊರಗಿಡಲ್ಪಟ್ಟ ಈ ಮೇದಾರ ಜಾತಿ ಸಹ ಒಂದು. ಮನೆ ಮಠ ಆಸ್ತಿಯಿಲ್ಲದ ಸಾಮಾಜಿಕ ಸ್ಥಾನಮಾನ ಸಿಗದೆ ಕಿತ್ತು ತಿನ್ನುವ ಬಡತನ ಕಳೆದುಕೊಳ್ಳಲೆಂದು ನಗರಕ್ಕೆ ಸುಮಾರು 60 ವರ್ಷಗಳಿಗಿಂತಲೂ ಹಿಂದೆ ಈ ಮೇದಾರರು 20 ರಿಂದ 30 ಜನರು ಬೆಂಗಳೂರಿಗೆ ಬಂದರು. ಇವರ ಕಸುಬು ಬಿದಿರಿನಿಂದ ಚಾಪೆ, ಬುಟ್ಟಿ, ಮರಗಳನ್ನು, ಇತ್ಯಾದಿ ವಸ್ತುಗಳನ್ನು ತಯಾರು ಮಾಡಿವಂತಹದ್ದು. ಇವರು ಮೈಸೂರು ಮತ್ತು ಹೆಚ್ ಡಿ ಕೋಟೆಯ ಭಾಗಗಳಿಂದ ಬಂದವರು. ಇವರಿಗೆ ಬಹುಮುಖ್ಯವಾಗಿ ಬಿದಿರು ಸಿಗದೇ ಇರುವುದಕ್ಕೆ ಮತ್ತು ಇವರು ತಯಾರಿಸುವ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಸಿಗದಿದ್ದಕ್ಕೆ ಬೆಂಗಳೂರಿಗೆ ಬರಲು ಕಾರಣ.

ಎಲ್ಲವನ್ನೂ ಹಣದಿಂದಲೇ ಮಾರಲಾಗುವ ಮಾರುಕಟ್ಟೆಯಾಗಿರುವ ಈ ನಗರದಲ್ಲಿ ಇವರಿಗೆ ಆರಂಭದಲ್ಲಿ ಬಿದಿರನ್ನು ಖರೀದಿವಂತಹ ಶಕ್ತಿ ಕೂಡ ಇರಲಿಲ್ಲ. ಮತ್ತೆ ಇವರಿಗೆ ಬೇರೆ ಯಾವುದೇ ಕೆಲಸ ಕೂಡ ಗೊತ್ತಿರಲಿಲ್ಲ. ಇಲ್ಲಿಗೆ ಬಂದಾಗ ಬದುಕಲು ತುಂಬಾ ಕಷ್ಟವಾಗಿತ್ತು. ಮತ್ತೆ ಮರಳಿ ಊರಿಗೂ ಹೋಗಲು ಅಗದಷ್ಟು ಬಡತನ ಇವರನ್ನು ಕಿತ್ತು ತಿನ್ನುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿದ್ದ ಇವರು ಕೆ.ಆರ್ ಮಾರ್ಕೆಟ್ ನಲ್ಲಿ ಕಡಿಮೆ ಕೂಲಿಗೆ ಮೂಟೆ ಹೊರುವುದಕ್ಕೆ ಮತ್ತು ಕುದುರೆಗಳಿಗೆ ಹುಲ್ಲನ್ನು ತಂದು ಹಾಕುವುದಕ್ಕೆ ಇನ್ನಿತರೆ ಕೆಲಸಗಳಿಗೆ ಸೇರಿಕೊಂಡರು.

ಹೀಗೆ ಎರಡು ಮೂರು ವರ್ಷಗಳು ಆದನಂತರ ಬಡ್ಡಿ ಮಾಫಿಯಾಕ್ಕೆ ಹೆಸರಾದ ಪಾರ್ವತಿಪುರದಲ್ಲಿ ಬಡ್ಡಿಗೆ ಸಾಲವನ್ನು ಪಡೆದು ಬಿದಿರನ್ನು ಖರೀದಿಸಿ ಚಾಮರಾಜ ಪೇಟೆಯಲ್ಲಿ ಮತ್ತೆ ತಮ್ಮ ಕುಲ ಕಸುಬನ್ನು ಮಾಡಲು ಶುರು ಮಾಡಿದರು. ಇವತ್ತಿಗೆ ಸರ್ಕಾರ ಎಷ್ಟೇ ಸಾಲ ಸೌಲಭ್ಯಗಳನ್ನು ಕಲ್ಪಿಸಿದರೂ ಇವರಿಗೆ ಅದ್ಯಾವುದೇ ಸಾಲ ಸೌಕರ್ಯಗಳು ಸಿಕ್ಕಿಲ್ಲ ಇಂದಿಗೂ ಪಾರ್ವತಿಪುರದ ಲೇವಾದೇವಿಗಾರರ ಹತ್ತಿರವೇ ನೂರಕ್ಕೆ ಇಪ್ಪತ್ತಂತೆ ಬಡ್ಡಿ ಸಾಲ ಪಡೆಯುತ್ತಿದ್ದಾರೆ.

ಆಧುನೀಕರಣ ಮತ್ತು ಅಭಿವೃದ್ಧಿ ಸದಾ ಬಯಸುವ ಬೆಂಗಳೂರುನಂತಹ ನಗರಗಳು ಬಂಡವಾಳ ಶಾಹಿಗಳಿಗೆ ಶ್ರೀಮಂತರ ಪಾಲಿಗೆ ಚಿನ್ನ ಸಿಗುವಂತಹ ಗಣಿಯಾಗಿದೆ ಹೊರತು ಇಂತಹ ಮೇದಾರ ಸಮುದಾಯಗಳಿಗೆ ಎಂದೂ ದಾರಿ ದೀಪವಾಗುವುದಿಲ್ಲ.

ಅಂತಹ ಅಭಿವೃದ್ಧಿಯ ಫಲವಾಗಿ ಜನ್ಮ ಪಡೆದು ನಗರಕ್ಕೆ ಬಂದ ಪ್ಲಾಸ್ಟಿಕ್ ಮತ್ತು ಪೈಬಾರಿನಂತಹ ವಸ್ತಗಳು ಈ ಮೇದಾರರಂತಹ ಕುಶಲಕರ್ಮಿಗಳ ಬದುಕನ್ನು ಸಂಪೂರ್ಣ ನಾಶಗೊಳ್ಳುವಂತೆ ಮಾಡಿ ಬಿಟ್ಟವು. ಇಲ್ಲಿನ ಕುಶಲ ಕರ್ಮಿಗಳು ತಯಾರಿಸುವ ಉತ್ಪನ್ನಗಳ ಜಾಗಗಳನ್ನು ಇಂತಗ ಅತ್ಯಾಧುನಿಕವಾದ ಪ್ಲಾಸ್ಟಿಕ್ ನಂತಹ ವಸ್ತುಗಳು ಜಾಗವನ್ನು ಆಕ್ರಮಿಸಿಕೊಂಡು ತಮ್ಮ ಭದ್ರ ಬುನಾದಿ ಹಾಕಿಕೊಂಡು ಬಿಟ್ಟವು. ಇಲ್ಲಿನ ದೇಸಿ ಉತ್ಪನ್ನಗಳನ್ನು ಕೊಂಡುಕೊಳ್ಳುವ ಗ್ರಾಹಕರನ್ನು ತನ್ನೆಡೆಗೆ ಆಕರ್ಷಿಸಲ್ಪಟ್ಟವು.

ಇಂತಹ ಹೊಡೆತ ತಿಂದ ಮೇದಾರು ಬದುಕುಳಿಯಲು ಅನೇಕ ಕಸರತ್ತನ್ನೇ ಮಾಡಬೇಕಾಯಿತು. ಮೊದಲು ಬುಟ್ಟಿಗಳನ್ನು, ಮರಗಳನ್ನು ಹೆಣೆಯುತ್ತಿದವರಿಗೆ ಇವತ್ತಿಗೆ ಕ್ರಿಯಾತ್ಮಕವಾದ ಆಕರ್ಷಕವಾದ ಹೊಸ ಹೊಸ ವಿನ್ಯಾಸದ ಮರಗಳನ್ನು ಬುಟ್ಟಿ, ಚಾಪೆಗಳನ್ನು, ಗೃಹ ಅಲಂಕಾರಿ ವಸ್ತಗಳನ್ನು ಇತ್ಯಾದಿ ವಸ್ತುಗಳನ್ನು ತಯಾರು ಮಾಡುವುದು ಮತ್ತು ಮಾರಾಟ ಮಾಡುವುದು ದಿನ ನಿತ್ಯದ ಸವಾಲಿನ ಕೆಲಸವಾಗಿಬಿಟ್ಟಿದೆ.

ಬ್ಯಾಂಬು ಬಜಾರಿನಲ್ಲಿ ಒಂದು ಬಿದಿರಿಗೆ 150 ರಿಂದ 200 ರೂ ಕೊಟ್ಟು ತಂದು ದಿನಕ್ಕೆ ಒಂದೆರಡು ಬುಟ್ಟಿ ಮತ್ತು ಚಾಪೆ ಹೆಣೆದು ಮಾರಾಟ ಮಾಡಿ ಬದುಕು ಸಾಗಿಸುವುದು ಇವತ್ತಿಗೆ ಅತಿ ದೊಡ್ಡ ಸವಾಲಿನ ಕೆಲಸವೇ ಆಗಿಬಿಟ್ಟಿದೆ.

ಇನ್ನೊಂದು ಕಡೆ ಈ ಮೇದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಈ ಜಾತಿಗಾಗಿ ಸರ್ಕಾರ ನೀಡುವ ಯಾವುದೇ ಯೋಜನೆಗಳಾಗಲಿ, ಸೌಲಭ್ಯಗಳಾಗಲಿ ಇಲ್ಲಿಯರೆವಗೂ ಸಮರ್ಪಕವಾಗಿ ಸಿಕ್ಕಿಲ್ಲ. ಸುಮಾರು 100 ಕುಟುಂಬಗಳಿರುವ ಈ ಮೇದಾರರಲ್ಲಿ ಒಬ್ಬರಿಗೂ ಕೂಡ ಸ್ವಂತ ಮನೆ ಇಲ್ಲ. ಚಾಮರಾಜ ಪೇಟೆಯ ಅಕ್ಕಪಕ್ಕದ ಸ್ಲಂಗಳಲ್ಲಿ ತಿಂಗಳಿಗೆ ಐದಾರು ಸಾವಿರ ಬಾಡಿಗೆ ಕಟ್ಟುತ್ತಾ ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಸುಮಾರ 25 ರಷ್ಟು ಜನರಿಗೆ ಬಾಡಿಗೆ ಮನೆಯನ್ನು ತೆಗೆದುಕೊಳ್ಳಲು ಶಕ್ತಿಯೂ ಇಲ್ಲದೆ ರೋಡಿನ ಪಕ್ಕದಲ್ಲೆ ಸೇಡ್ ಹಾಕಿಕೊಂಡು ಬದುಕುತ್ತಿದ್ದಾರೆ.

ರೋಡಿನ ಫುಟ್ಪಾತ್ ನಲ್ಲೆ ಮಳೆಗಾಳಿಗೆ ಹಾರಿಹೋಗುವ ಸೆಡ್ ಗಳು ಅದೇ ರೋಡಿನಲ್ಲಿ ತಿರುಗಾಡುವ ಯಾವ ಸಚಿವ ಮಂತ್ರಿಗಳಿಗಾಗಲಿ ಸರ್ಕಾರಿ ಅಧಿಕಾರಿಗಳಿಗಾಗಲಿ ಕಾಣದೆ ಹೋಗಿರುವುದು ಸರ್ಕಾರಗಳ ಕುರುಡು ತನವನ್ನು ತೋರಿಸುತ್ತದೆ.

ಮೂರ್ನಾಲ್ಕು ತಲೆಮಾರಿನಿಂದ ನಗರದಲ್ಲಿರುವ ಇವರಲ್ಲಿ ಇಲ್ಲಿಯವರೆಗೂ ಯಾರೊಬ್ಬರೂ ಸಹ ಹೈಸ್ಕೂಲ್ ಹಂತದವರೆಗಿನ ಶಿಕ್ಷಣ ಪಡೆದಿಲ್ಲ. ಇರುವ ಜಾಗದ ಅಕ್ಕ ಪಕ್ಕದ ಸ್ಥಳಗಳಲ್ಲೆ ಸರ್ಕಾರಿ ಶಾಲೆಗಳಿದ್ದರೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಆಗದಷ್ಟು ಬಡತನ ಇವರನ್ನು ಕಾಡುತ್ತಿದೆ. ಇಂತಹದೇ ಸ್ಥಿತಿಯಲ್ಲಿ ಹಲವಾರು ಸಮುದಾಯಗಳು ಕೂಡ ಇವೆ.

ನಮ್ಮ ಸರ್ಕಾರಗಳ ಕಣ್ಣಿಗೆ ಕಾಣಿಸುತ್ತಿಲ್ವೋ ಇಲ್ಲ ಕಂಡರು ಸುಮ್ಮನಿದ್ದಾರೋ ನಾವು ಯೋಚಿಸಬೇಕು. ತಳ ಸಮುದಾಯಗಳ ಏಳಿಗೆಗಾಗಿ ರೂಪಿಸುವಂತಹ ಯಾವ ಯೋಜನೆಗಳು ಅ ಸಮುದಾಯಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದಕ್ಕೆ ಈ ಮೇದಾರ ಸಮುದಾಯವೇ ಜೀವಂತ ಸಾಕ್ಷಿ. ಇವೆಲ್ಲ ಯಾರ ಬಾಯಿಗೆ ಸೇರುತ್ತಿವೆ ಎಂಬುದನ್ನು ಈ ಸಮಾಜದ ಪ್ರಜ್ಞಾವಂತ ಪ್ರಜೆಗಳು ಪ್ರಶ್ನಿಸಬೇಕು. ನಿಜವಾಗಿಯೂ ನಮ್ಮನ್ನು ಅಳುತ್ತಿರುವ ಸರ್ಕಾರಗಳು ಯಾರ ಪರವಾಗಿ ಮತ್ತು ಯಾವ ಅಭಿವೃದ್ಧಿಯ ಮಾನದಂಡಗಳಿಗೆ ಜೋತು ಬಿದ್ದಿವೆ ಎಂದು ಜನತೆ ಚಿಂತಿಸಬೇಕು.

ಇವತ್ತಿಗೆ ಯಾವುದೇ ಒಂದು ಸಮುದಾಯ ಶಿಕ್ಷಣ ಪಡೆಯದೆ ಹೋದರೆ ಅ ಸಮುದಾಯದ ಜೀವನ ಮಟ್ಟ ಸುಧಾರಿಸಲು, ಹೊರ ಜಗತ್ತಿನ ಜೊತೆ ವ್ಯವರಿಸಲು, ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು, ಮತ್ತು ಉದ್ಯಮ ವ್ಯಾಪಾರವನ್ನು ಆರಂಭಿಸಲು ಸಾಧ್ಯವಾಗುವುದಿಲ್ಲ, ಇದಕ್ಕೆ ಸಾಕ್ಷಿ ಮೂರು ತಲೆಮಾರಿನಿಂದ ಇವತ್ತಿನವರೆಗೂ ಶಾಲೆಗೆ ಕಾಲಿಡದ ಬೆಂಗಳೂರಿನಲ್ಲಿರುವ ಮೇದಾರ ಸಮುದಾಯದ ಜನರೇ ಸಾಕ್ಷಿ.

ಪ್ರತಿದಿನ ಉರಿ ಬಿಸಿಲಿನಲ್ಲಿ ಗ್ರಾಹಕರಿಗಾಗಿ ಕಾಯುವ ಇವರಿಗೆ ಫೆಬ್ರವರಿ ತಿಂಗಳಿನಿಂದ ಮೇ ತಿಂಗಳಿನವರೆಗೆ ಮಾತ್ರ ಸರಿಯಾದ ವ್ಯಾಪಾರವಾಗುವುದು. ಈ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವುದರಿಂದ ಮದುವೆ ಸಮಾರಂಭಗಳಿಗೆ, ಧಾರ್ಮಿಕ ವಿಧಿ ವಿಧಾನಗಳಿಗೆ ಬಿದಿರಿನ ಉತ್ಪನ್ನಗಳ ಅಗತ್ಯ ಇರುತ್ತದೆ ಈ ಕಾರಣಕ್ಕಾಗಿ ಇವರು ತಯಾರಿಸುವ ಸಾಮಾಗ್ರಿಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಇನ್ನು ಉಳಿದ ತಿಂಗಳು ಇವರ ವ್ಯಾಪಾರ ನಷ್ಟದಲ್ಲೆ ನಡೆಯುತ್ತದೆ.

ಮಾಡರ್ನ್ ಆಗಿರುವ ಸಮಾಜಕ್ಕೆ ಇಂತಹ ಸಮುದಾಯಗಳು ಬೇಕು ಬೇಡವಷ್ಟೆ. ಇವತ್ತಿಗೂ ಮಡಿಕೆ ಮಾಡುವವರು, ಕ್ಷೌರಿಕರು, ಹೀಗೆ ಬುಟ್ಟಿ ಹೆಣೆಯುವವರು ಈ ಸಮಾಜಕ್ಕೆ ಮಾರ್ಡನ್ ಅಪ್ ಡೇಟ್ ಆಗಿದ್ದರೆ ಮಾತ್ರ ಎಲ್ಲಾ ಕಾಲಕ್ಕೂ ಅಗತ್ಯವಾಗಿರುತ್ತಾರೆ. ಇಂತಹ ಸಮುದಾಯಗಳ ಸೇವೆಗಳು ಎಲ್ಲ ಕಾಲಕ್ಕೂ ಅಗತ್ಯವಾಗಿದ್ದರೂ ಇದು ಅಧುನಿಕ ಮತ್ತು ಕ್ರಿಯಾತ್ಮಕಗೊಂಡರೆ ಮಾತ್ರ ಇವುಗಳು ಉಳಿದುಕೊಳ್ಳಲು ಸಾಧ್ಯ.

ಇಂತಹ ಸ್ಥಿತಿಗಳನ್ನು ರೋಡಿ ಪುಟ್ ಬಾತ್ ನಲ್ಲಿರುವ ಮೇದಾರು ಎದುರಿಸುತ್ತಾ ಬದುಕುತ್ತಿದ್ದಾರೆ. ಇವತ್ತಿಗೆ ದೇಸಿ ಲೆಬಲ್ ನಲ್ಲಿ ಬಂಡವಾಳಶಾಹಿಗಳು ಇಂತಹ ಹ್ಯಾಂಡ್ ಮೇಡ್ ಉತ್ಪನ್ನಗಳ ಮಾರುವ ದೇಸಿ ಮಾಲ್ ಗಳನ್ನು ತೆರೆದಿದ್ದಾರೆ ಇವರಿಂದಲೇ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಖರೀದಿಸಿ ದೇಸಿ ಎಂಬ ಬ್ರಾಂಡ್ ನಲ್ಲಿ ಹೆಚ್ಚು ಬೆಲೆಗೆ ಮಾರುತ್ತಿದ್ದಾರೆ. ಇದು ಅಷ್ಟೋ ಇಷ್ಟೋ ಇದ್ದ ಈ ಸಮುದಾಯಗಳ ಗ್ರಾಹಕರನ್ನು ಚೌಕಾಸಿ ಮಾಡಲಾಗದ ದೇಸಿ ಬ್ರಾಂಡ್ ಮಾಲ್ ಆರ್ಕಷಿಸುತ್ತಿವೆ. ಈ ಬಡ ಕುಶಲ ಕರ್ಮಿಗಳಿಗೆ ಅತಿ ದೊಡ್ಡ ಹೊಡೆತವೂ ಕೂಡ ಹೌದು.

ಸಂಶೋಧನಾ ಬರಹ: ಕಾವೇರಿದಾಸ್ ಲಿಂಗನಾಪುರ