ನವದೆಹಲಿ(ಫೆ:13): ಆಸ್ಟ್ರೇಲಿಯಾ ಭಾರತ ತಂಡಗಳ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಬಿಸಿಸಿಐ ನ ಆಯ್ಕೆ ಮಂಡಳಿ ಫೆ 15ಕ್ಕೆ ತಂಡವನ್ನು ಪ್ರಕಟಿಸಲಿದೆ. ಮುಂಬರುವ ಏಕದಿನ ವಿಶ್ವಕಪ್ ನ ಹಿನ್ನೆಲೆಯಲ್ಲಿ ಈ ಸರಣಿ ಆಟಗಾರರಿಗೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಉತ್ತಮ ವೇದಿಕೆ ಆಗಲಿದೆ,ಹಾಗೂ ಮುಂಬರುವ ವಿಶ್ವಕಪ್ ಗೆ ಆಯ್ಕೆಯಾಗಲು ಆಯ್ಕೆ ಮಂಡಳಿಯ ಗಮನ ಸೆಳೆಯಲು ಉಪಯುಕ್ತವಾಗಲಿದೆ,ಆಟಗಾರರು ಎಷ್ಟರಮಟ್ಟಿಗೆ ಇದನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ವಿಶ್ವಕಪ್ ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಆಟಗಾರರ ನಡುವೆ ಪೈಪೋಟಿ ಹೆಚ್ಚಾಗಿದ್ದು, ಕೆ ಎಲ್ ರಾಹುಲ್ ಹಾಗೂ ಅಜಿಂಕ್ಯ ರಹಾನೆಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಈ ಸರಣಿಯಲ್ಲಿ ಇವರಿಬ್ಬರಿಗೆ ಸಾಮರ್ಥ್ಯ ಸಾಬೀತು ಪಡಿಸಲು ಕೊನೆಯ ಅವಕಾಶ ನೀಡಲಾಗುತ್ತದೆ. ನ್ಯೂಜಿಲ್ಯಾಂಡ್ ವಿರುದ್ಧದ ಕೊನೆಯ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಕೊಹ್ಲಿ ತಂಡಕ್ಕೆ ವಾಪಾಸಾಗುವುದು ಬಹುತೇಕ ಖಚಿತವಾಗಿದೆ.

ವಿಶ್ವಕಪ್ ತಂಡದಲ್ಲಿ ಮೊದಲ ವಿಕೆಟ್ ಕೀಪರ್ ಧೋನಿ ಅವರ ನಂತರದ ಎರಡನೇ ವಿಕೆಟ್ ಕೀಪಿಂಗ್ ಗಾಗಿ ದಿನೇಶ್ ಕಾರ್ತಿಕ್ ಹಾಗೂ ರಿಷಬ್ ಪಂತ್ ನಡುವೆ ಪ್ರಬಲ ಪೈಪೋಟಿ ಇದ್ದು,ಆಸೀಸ್ ವಿರುದ್ಧದ ಸರಣಿ ಇವರಿಬ್ಬರಿಗೂ ಮಹತ್ವದ್ದಾಗಿದೆ.