ಕೊಲ್ಲೂರು(ಮಾ:11): ಕೊಲ್ಲೂರಿನ ಎಳಜಿತ್ ನಲ್ಲಿ ಯಕ್ಷಗಾನ ಕಾರ್ಯಕ್ರಮದಲ್ಲಿ ಪ್ರಖ್ಯಾತ ಕಲಾವಿದ ಹುಡುಗೋಡು ಚಂದ್ರಹಾಸ ಅವರು ವೇದಿಕೆ ಮೇಲೆ ಕುಸಿದು ಬಿದ್ದು ವಿಧಿವಶರಾದ ಘಟನೆ ಭಾನುವಾರ ರಾತ್ರಿ ನಡೆದಿದೆ. ಭೀಷ್ಮ ವಿಜಯ ಪ್ರಸಂಗದಲ್ಲಿ ಸಾಲ್ವನ ಪಾತ್ರ ನಿರ್ವಹಿಸುತ್ತಿದ್ದ ಅವರು ಭೀಷ್ಮ ಎಂಬ ಉದ್ಘಾರ ಮಾಡುತ್ತಲೇ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಅವರನ್ನು ಸಹ ಕಲಾವಿದರು ಹಾಗೂ ಸ್ಥಳದಲ್ಲಿದ್ದವರು ಮೇಲಕ್ಕೆತ್ತಲು ಪ್ರಯತ್ನಿಸಿದರೂ ಆದರೆ ಆಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಪ್ರಖ್ಯಾತ ಕಲಾವಿದರಾಗಿದ್ದ ಅವರು ಡೇರೆ ಮೇಳಗಳಾಗಿದ್ದ ಸಾಲಿಗ್ರಾಮ,ಪೆರ್ಡೂರು ಮುಂತಾದ ಮೇಳಗಳಲ್ಲಿ ದಶಕಗಳ ಕಾಲ ತಿರುಗಾಟ ನಡೆಸಿ ತನ್ನದೇ ಆದ ಛಾಪು ಮೂಡಿಸಿದ್ದರು.

ಸಾಲ್ವ,ಭೀಮ,ಕೌರವ,ಹನುಮಂತ,ಕೀಚಕ ಹೀಗೆ ಹಲವು ವೇಷಗಳಲ್ಲಿ ತನ್ನದೇ ಆದ ಪ್ರತಿಭೆ ಮೆರೆದು ಖ್ಯಾತರಾಗಿದ್ದರು.