ಬೆಂಗಳೂರು(ಏ:02): ದೇಶದ ಅಭಿಮಾನವನ್ನು ನರೇಂದ್ರ ಮೋದಿ ಅವರಿಗೆ ಮಾತ್ರ ಗುತ್ತಿಗೆ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದರ್ ಜಿಲ್ಲೆಗೆ ಪ್ರವಾಸ ಕೈಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೂ ಹಿಂದುಗಳೇ , ನಾವೂ ಭಾರತೀಯರೇ, ನಮಗೂ ದೇಶದ ರಕ್ಷಣೆ ಹೇಗೆ ಮಾಡಬೇಕೆಂಬುದು ತಿಳಿದಿದೆ ಎಂದಿದ್ದಾರೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿ ಹೇಗೆ ದೇಶ ಕಾಪಾಡಿದ್ದಾರೆ ಎಂಬುದನ್ನು ಇತಿಹಾಸ ತೆಗೆದುನೋಡಲಿ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಆಗಲಿ, ವಿರೋಧ ಪಕ್ಷವಾಗಲಿ ಯಾರೂ ಕೂಡ ಉಗ್ರವಾದಕ್ಕೆ ಬೆಂಬಲ ನೀಡುತ್ತಿಲ್ಲ. ಆದರೂ ನರೇಂದ್ರ ಮೋದಿ ಅವರು ಈ ವಿಚಾರವಾಗಿ ಮಾಡಿರುವ ಭಾಷಣ ಪ್ರಧಾನಿ ಹುದ್ದೆಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.