ನವದೆಹಲಿ(ಮಾ:16): ಕಾಂಗ್ರೆಸ್ ಪಕ್ಷ ಇಂದಿಗೂ ಭಯೋತ್ಪಾದನೆ,ಪ್ರತ್ಯೇಕತಾವಾದ ಮತ್ತು ನಕ್ಸಲ್ವಾದದ ಬಗ್ಗೆ ಕಾಂಗ್ರೆಸ್ ಪಕ್ಷ ತುಂಬಾ ಸಂಕೋಚದ ಪ್ರವೃತ್ತಿ ಹೊಂದಿದೆ,ಕಾಂಗ್ರೆಸ್ ಪಕ್ಷವು ಯಾವತ್ತೂ ಭಯೋತ್ಪಾದನೆ ವಿರುದ್ಧ ಮೃದು ದೋರಣೆ ಹೊಂದಿದೆ ಎಂದು ಆರೋಪಿಸುವ ಮೂಲಕ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ದೇಶದ ಭದ್ರತೆಯ ವಿಷಯದಲ್ಲಿ ಕಾಂಗ್ರೆಸ್ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ.

ದೇಶದ ಭದ್ರತೆಗೆ ಬೆದರಿಕೆ ನೀಡುವ ಈ ಪಿಡುಗುಗಳ ಬಗ್ಗೆ ಕಾಂಗ್ರೆಸ್ ಪಕ್ಷ ನಿರ್ಣಾಯಕ ದಿಟ್ಟ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಅಮಿತ್ ಷಾ,ರಾಹುಲ್ ಗಾಂಧಿ ವಿರುದ್ಧ ವಾಕ್ಸಮರ ನಡೆಸಿದರು. ಕಾಂಗ್ರೆಸ್ ಪಕ್ಷಕ್ಕೆ ವ್ಯತಿರಿಕ್ತವಾಗಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿ ಎ ಸರ್ಕಾರ ರಾಷ್ಟ್ರೀಯ ಏಕತೆ,ಭದ್ರತೆ ಹಾಗೂ ಭಾವೈಕ್ಯದ ಹಿತಾಸಕ್ತಿಯನ್ನು ಭಯೋತ್ಪಾದನೆ ಮತ್ತು ನಕ್ಸಲ್ ವಾದದ ವಿರುದ್ಧ ಧೃಡವಾದ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

ಜೈಶ್‌ ಎ ಮೊಹಮ್ಮದ್‌ ಸ್ಥಾಪಕ ಉಗ್ರ ಮಸೂದ್‌ ಅಜರ್‌ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪಾಕಿಸ್ಥಾನದ ಮೇಲೆ ಅಂತಾರಾಷ್ಟ್ರೀಯ ಸಮುದಾಯ ತೀವ್ರವಾದ ಒತ್ತಡ ಹೇರುತ್ತಿರುವ ನಡುವೆ ರಾಹುಲ್‌ ಕಂದಹಾರ್‌ ವಿಷಯವನ್ನು ರಾಜಕೀಯಗೊಳಿಸುತ್ತಿರುವುದು ದುರದೃಷ್ಟಕರ ಎಂದು ಅಮಿತ್ ಷಾ ಹೇಳಿದ್ದಾರೆ.