ಮೈಸೂರು(ಜು:12): ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಚಿವ ಎಚ್‌.ಡಿ. ರೇವಣ್ಣ ಚಾಮುಂಡಿಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿದ್ದಾರೆ, ಸುಮಾರು 20 ನಿಮಿಷಗಳ ಕಾಲ ದೇವರ ವಿಗ್ರಹದ ಮುಂದೆ ಕುಳಿತ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಸರಲ್ಲಿ ಸಂಕಲ್ಪ ಪೂಜೆ ನೆರವೇರಿಸಿದರು ಎಂದು ತಿಳಿದುಬಂದಿದೆ.

ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಮಾತನಾಡಿದ ಸಚಿವ ಎಚ್‌.ಡಿ.ರೇವಣ್ಣ, ‘ಕುಮಾರಸ್ವಾಮಿ ಅವರಿಗೆ ದೇವರು ಆಶೀರ್ವಾದ ಮಾಡಿ ಕೊಟ್ಟಿರುವ ಸರ್ಕಾರ ಇದು. ಏನು ಮಾಡಿದ್ರೂ ಬಿದ್ದು ಹೋಗಲ್ಲ. ಉಳಿಯುತ್ತೆ’ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ನಮ್ಮ ಬಗ್ಗೆ ಮಾತನಾಡಿಲ್ಲ ಅಂದ್ರೆ ಕೆಲವರಿಗೆ ಊಟ ಸೇರಲ್ಲ’ ಎಂದು ತಿಳಿಸಿದರು.

ದೇವರ ಆಶೀರ್ವಾದ ಇರುವವರಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುತ್ತಾರೆ. ಚಾಮುಂಡೇಶ್ವರಿಯ ಅನುಗ್ರಹ ಕುಮಾರಸ್ವಾಮಿ ಮೇಲಿದೆ . ಸದ್ಯಕ್ಕೆ ಸರ್ಕಾರಕ್ಕೆ ಏನು ತೊಂದರೆ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಾ.ರಾ ಮಹೇಶ್ ಬಿಜೆಪಿ ನಾಯಕರನ್ನ ಭೇಟಿ ಮಾಡಿರೋ ವಿಚಾರ ನನಗೆ ಗೊತ್ತಿಲ್ಲ ಬಿಜೆಪಿ ಜೊತೆ ಅಧಿಕಾರ ಹಂಚಿಕೊಳ್ಳುವ ಬೆಳವಣಿಗೆ ಸದ್ಯಕ್ಕಿಲ್ಲ. ಇಂದಿನ ಅಧಿವೇಶನ ಕೂಡ ಸುಸೂತ್ರವಾಗಿ ನಡೆಯುತ್ತದೆ ಎಂದರು.