ಬೆಂಗಳೂರು(ಡಿ.23) ರಾಜ್ಯ ವಿಧಾನಸಭೆಯ ಉಪಚುನಾವಣೆಯಲ್ಲಿ ಆಯ್ಕೆಯಾದ 15 ಅಭ್ಯರ್ಥಿಗಳ ಪೈಕಿ 13 ಸದಸ್ಯರು ಶಾಸಕರಾಗಿ ನಿನ್ನೆ ಭಾನುವಾರದಂದು ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯ ವಿಧಾನಸಭೆಯ 15 ಮತ ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಭಾರತೀಯ ಜನತಾ ಪಕ್ಷದ 12 ಹಾಗೂ ಓರ್ವ ಪಕ್ಷೇತರ ಸದಸ್ಯರೂ ಒಳಗೊಂಡಂತೆ ಹದಿಮೂರು ಸದಸ್ಯರು ನಿನ್ನೆ ಶಾಸಕರಾಗಿ ಪ್ರಮಾಣವಚನವನ್ನು ಸ್ವೀಕರಿಸಿದರು.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಮ್ಮುಖದಲ್ಲಿ ನೂತನ ಸದಸ್ಯರಾದ ಅಥಣಿ ವಿಧಾನ ಸಭಾ ಕ್ಷೇತ್ರದ ಮಹೇಶ್ ಈರನಗೌಡ ಕುಮಟಳ್ಳಿ, ಕಾಗವಾಡ ಕ್ಷೇತ್ರದ ಶ್ರೀಮಂತ್ ಬಾಳಾಸಾಹೇಬ್ ಪಾಟೀಲ್, ಗೋಕಾಕ್ ಕ್ಷೇತ್ರದ ರಮೇಶ್ ಲಕ್ಷ್ಮಣ ರಾವ್ ಜಾರಕಿಹೊಳಿ, ಯಲ್ಲಾಪುರ ಕ್ಷೇತ್ರದ ಅರಬೈಲ್ ಹೆಬ್ಬಾರ್ ಶಿವರಾಮ್, ಹಿರೇಕೆರೂರು ಕ್ಷೇತ್ರದ ಬಿ ಸಿ ಪಾಟೀಲ್, ರಾಣೇಬೆನ್ನೂರು ಕ್ಷೇತ್ರದ ಅರುಣ್ ಕುಮಾರ್ ಗುತ್ತೂರು, ವಿಜಯನಗರ ಕ್ಷೇತ್ರದ ಆನಂದ್ ಸಿಂಗ್, ಚಿಕ್ಕಬಳ್ಳಾಪುರ ಕ್ಷೇತ್ರದ ಡಾ ಕೆ. ಸುಧಾಕರ್, ಕೃಷ್ಣರಾಜಪುರ ಕ್ಷೇತ್ರದ ಬಿ ಎ ಬಸವರಾಜ, ಯಶವಂತಪುರ ಕ್ಷೇತ್ರದ ಎಸ್ ಟಿ ಸೋಮಶೇಖರ್, ಮಹಾಲಕ್ಷ್ಮೀ ಬಡಾವಣೆಯ ಕೆ ಗೋಪಾಲಯ್ಯ, ಹೊಸಕೋಟೆ ಕ್ಷೇತ್ರದ ಶರತ್ ಕುಮಾರ್ ಬಚ್ಚೇಗೌಡ ಹಾಗೂ ಕೃಷ್ಣರಾಜಪೇಟೆ ಕ್ಷೇತ್ರದ ಎಂ ಸಿ ನಾರಾಯಣಗೌಡ ಅವರು ಶಾಸಕರಾಗಿ, ಎಲ್ಲರೂ ಕನ್ನಡ ಭಾಷೆಯಲ್ಲಿಯೇ, ಪ್ರಮಾಣ ವಚನ ಸ್ವೀಕರಿಸಿದರು.

ಬಿ ಎ ಬಸವರಾಜ ಮತ್ತು ಎಸ್ ಟಿ ಸೋಮಶೇಖರ್ ಅವರು ಸತ್ಯ-ನಿಷ್ಠೆಯ ಹೆಸರಿನಲ್ಲಿ, ಬಿ ಸಿ ಪಾಟೀಲ್ ಅವರು ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಿ ಹಾಗೂ ಉಳಿದ ಹತ್ತೂ ಸದಸ್ಯರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಈ ಪ್ರಮಾಣವಚನ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕಂದಾಯ ಸಚಿವ ಆರ್ ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಅಬಕಾರಿ ಸಚಿವ ಹೆಚ್ ನಾಗೇಶ್ ಅವರೂ ಸೇರಿದಂತೆ ಹಲವು ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಈ ಕಾರ್ಯಕ್ರಮವನ್ನು ರಾಜ್ಯ ವಿಧಾನ ಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು ನಿರೂಪಣೆ ಮಾಡಿ ನಡೆಸಿಕೊಟ್ಟರು.