ನವದೆಹಲಿ(ಜು:11): ತಾವು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಲು ವಿಧಾನಸಭಾ ಸ್ಪೀಕರ್‌ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ ನಲ್ಲಿ ನಡೆದಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

ರಾಜೀನಾಮೆ ನೀಡಿರುವ ಶಾಸಕರುಗಳು ಇಂದು ಸಂಜೆ 6 ಗಂಟೆಯೊಳಗಾಗಿ ಸ್ಪೀಕರ್‌ ಅವರ ಮುಂದೆ ಹಾಜರಾಗಲು ನ್ಯಾಯಾಲಯ ಆದೇಶಿಸಿದ್ದು, ಈ ಶಾಸಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಕರ್ನಾಟಕ ಪೊಲೀಸ್‌ ಮಹಾ ನಿರ್ದೇಶಕರಿಗೆ ಸೂಚಿಸಿದೆ.

ಸುಪ್ರೀಂ ಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅತೃಪ್ತ ಶಾಸಕರ ಪರ ವಕೀಲ ಮುಕುಲ್‌ ರೋಹ್ಟಗಿ, ಮುಂಬೈನಲ್ಲಿರುವ ಎಲ್ಲಾ ಶಾಸಕರು ಇಂದು ಬೆಂಗಳೂರಿಗೆ ವಾಪಾಸ್ಸಾಗಿ ಸ್ಪೀಕರ್‌ ಮುಂದೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.