(ಫೆ:06): ಪ್ರಖ್ಯಾತ ಸರ್ಚ್ ಎಂಜಿನ್ ಗೂಗಲ್ ಕಂಪನಿಯ ಸಿಇಓ ಆಗಿರುವ ಭಾರತೀಯ ಸುಂದರ್ ಪಿಚೈ ಅವರ ಮೇಲೆ ಗೂಗಲ್ ಉದ್ಯೋಗಿಗಳ ವಿಶ್ವಾಸ ಕುಗ್ಗಿರುವ ಬಗ್ಗೆ ವರದಿಯಾಗಿದೆ. ಭವಿಷ್ಯದಲ್ಲಿ ಸುಂದರ್ ಪಿಚೈ ಅವರು ಗೂಗಲ್ ಕಂಪನಿಯನ್ನು ಸಮರ್ಥವಾಗಿ ಮುನ್ನಡೆಸುತ್ತಾರಾ ಎಂಬ ಪ್ರಶ್ನೆಗೆ ಈ ಬಾರಿ ಗೂಗಲ್ ಉದ್ಯೋಗಿಗಳಿಂದ ಕಡಿಮೆ ಅಂಕಗಳು ಲಭಿಸಿವೆ.

ಕಂಪನಿಯ ಆಂತರಿಕ ಸಮೀಕ್ಷೆಯಲ್ಲಿ,ಪಿಚೈ ಅವರು ಭವಿಷ್ಯದಲ್ಲಿ ಕಂಪನಿಯನ್ನು ಪರಿಣಾಮಕಾರಿ ಹಾಗೂ ಸಮರ್ಥವಾಗಿ ಮುನ್ನಡೆಸುತ್ತಾರಾ ಎಂಬ ಪ್ರಶ್ನೆಯನ್ನು ಈ ಬಾರಿಯೂ ಮುಂದಿಡಲಾಗಿತ್ತು,ಈ ಪ್ರಶ್ನೆಗೆ ಶೇ.75ರಷ್ಟು ಉದ್ಯೋಗಿಗಳು ಸಮ್ಮತಿ ಸೂಚಿಸಿದ್ದಾರೆ. ಆದರೆ ಕಳೆದ ವರ್ಷ ಈ ಪ್ರಶ್ನೆಗೆ ಈಬಾರಿಗಿಂತಲೂ ಹೆಚ್ಚು ಧನಾತ್ಮಕ ಉತ್ತರ ಪಡೆದಿದ್ದ ಪಿಚೈ ಅವರಿಗೆ ಈ ವರ್ಷ ವಿಶ್ವಾಸದ ಕೊರತೆ ಎದುರಾಗಿದೆ.

ಈ ಆಂತರಿಕ ಸಮೀಕ್ಷೆಯಿಂದ ಪಿಚೈ ನಾಯಕತ್ವಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಲಾಗಿದ್ದು,ಅವರ ನಾಯಕತ್ವದಲ್ಲಿ ಸಂಶೋಧನೆಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಗೂಗಲ್ ಹೆಸರು ಗಳಿಸಿದೆ ಎಂಬುದನ್ನು ಟೆಕ್ನಾಲಜಿ ಲೋಕ ಒಪ್ಪಿಕೊಂಡಿದೆ.ಒಟ್ಟಾರೆ ಹೆಚ್ಚು ಉದ್ಯೋಗಿಗಳ ವಿಶ್ವಾಸ ಗಳಿಸಿಕೊಳ್ಳಲು ಪಿಚೈ ವಿಫಲರಾದರೂ ಸಹಾ ನಾಯಕರಾಗಿ ಯಶಸ್ವಿಯಾಗಿದ್ದಾರೆ ಎಂಬುದು ತಿಳಿದುಬಂದಿದೆ.