ತುಮಕೂರು(ಜ:22): ನಡೆದಾಡುವ ದೇವರು ಲಿಂಗೈಕ್ಯರಾದರು ಎಂಬ ಸುದ್ದಿ ಹೊರಬರುತ್ತಿದ್ದಂತೆ ಸಿದ್ದಗಂಗಾ ಮಠದಲ್ಲಿ ನೀರವ ಮೌನ ಆವರಿಸಿರುವ ಜೊತೆಗೆ ಅಲ್ಲಿನ ಮಕ್ಕಳು ಬಿಕ್ಕಿ ಬಿಕ್ಕಿ ಅಳುವ ಆಕ್ರಂದನದ ಶಬ್ದ ಮುಗಿಲು ಮುಟ್ಟಿದೆ.

ನಡೆದಾಡುವ ದೇವರನ್ನು ಪ್ರತಿ ದಿನ ನೋಡಿ ಕಣ್ಣು ತುಂಬಿಕೊಂಡು ಖುಷಿ ಪಡುತ್ತಿದ್ದ ಅಲ್ಲಿನ ಮಕ್ಕಳು ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಬರುತ್ತಿದ್ದಹಾಗೆ ಅವರನ್ನು ಕಂಡು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು.

ನಡೆದಾಡುವ ದೇವರು ಇನ್ನಿಲ್ಲ ಎಂಬುದು ಇಡೀ ನಾಡಿನ ಜನತೆಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ನಮ್ಮ ನಾಡಿನ ಆಧ್ಯಾತ್ಮ ಜ್ಯೋತಿಯಾದ ಶ್ರೀಗಳು ಲಕ್ಷಾಂತರ ಜನರ ಜೀವನ ರೂಪಿಸುವ ಮಹತ್ಕಾರ್ಯ ಮಾಡಿ,ಅನ್ನದಾನ ಜೀವದಾನ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟ ಶತಾಯುಷಿ ಇವರ ಅಗಲಿಕೆ ನಮ್ಮ ನಾಡಿಗೆ ತುಂಬಲಾರದ ನಷ್ಟ ಉಂಟುಮಾಡಿದೆ.