ಬೆಂಗಳೂರು(ಜೂ:13): ರಾಜ್ಯದ ಬರ ನಿರ್ವಹಣೆಯಲ್ಲಿ ಸಮ್ಮಿಶ್ರ ಸರ್ಕಾರ ವಿಫಲವಾಗಿದ್ದು, ನಾಳೆಯಿಂದ ಎರಡು ದಿನಗಳ ಕಾಲ ಮೈತ್ರಿ ಸರ್ಕಾರದ ವಿರುದ್ಧ ಸತ್ಯಾಗ್ರಹ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಎಲ್ಲಾ ರಾಜ್ಯಗಳ ಬಿಜೆಪಿ ಅಧ್ಯಕ್ಷರ ಸಭೆಯನ್ನು ಆಯೋಜಿಸಲಾಗಿದ್ದು, ಈ ಸಭೆಯಲ್ಲಿ ಆಯಾ ರಾಜ್ಯದಲ್ಲಿನ ಬಿಜೆಪಿ ಸಾಧನೆಯ ಪರಮಾರ್ಶೆ ನಡೆಯಲಿದೆ ಎನ್ನಲಾಗುತ್ತಿದೆ.ಈ ಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಯಡಿಯೂರಪ್ಪ ಸಭೆಗೂ ಮುನ್ನ ಸಮ್ಮಿಶ್ರ ಸರ್ಕಾರದ ವಿರುದ್ಧ ತಾವು ಸತ್ಯಾಗ್ರಹ ಮಾಡುವ ಕುರಿತು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿದ ಬಿಎಸ್ ವೈ, ರಾಜ್ಯದ ಬರ ನಿರ್ವಹಣೆಯಲ್ಲಿ ದೋಸ್ತಿ ಸರ್ಕಾರ ವಿಫಲವಾಗಿದೆ. ಅಭಿವೃದ್ಧಿ ಎಂಬುದು ನಿಂತ ನೀರಾಗಿದೆ. ಅಲ್ಲದೇ ಜಿಂದಾಲ್ ಕಂಪೆನಿಗೆ ನಿಯಮ ಬಾಹೀರವಾಗಿ ಭೂಮಿ ಹಂಚಿಕೆ ಮಾಡಲಾಗುತ್ತಿದೆ. ಸರ್ಕಾರದ ಈ ಕ್ರಮವನ್ನು ಖಂಡಿಸಿ ನಾಳೆಯಿಂದ ಬಿಜೆಪಿ 2 ದಿನ ಹಗಲು ರಾತ್ರಿ ಸತ್ಯಾಗ್ರಹ ನಡೆಸಲಿದೆ ಎಂದು ತಿಳಿಸಿದ್ದಾರೆ.