ಬೆಂಗಳೂರು(ಜೂ:10) : ಜ್ಞಾನಪೀಠ ಪ್ರಶಸ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿ.ಎಸ್ ವೈ, ಹಿರಿಯ ಸಾಹಿತಿ, ಬರಹಗಾರ, ನಟರಾಗಿದ್ದ ಗಿರೀಶ್ ಕಾರ್ನಾಡ್ ಅಗಲಿಕೆ ನೋವು ತಂದಿದೆ. ಕನ್ನಡ ಸಾಹಿತ್ಯ ಲೋಕ ಮತ್ತು ಚಿತ್ರರಂಗಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಕಾರ್ನಾಡ್ ಕುಟುಂಬ ಸದಸ್ಯರಿಗೆ ದುಃಖಭರಿಸುವ ಶಕ್ತಿಯನ್ನು ಭಗವಂತ ಕರುಣಸಲಿ ಎಂದು ಬಿಎಸ್ ವೈ ಸಂತಾಪ ಸೂಚಿಸಿದ್ದಾರೆ.

ಹಿರಿಯ ಸಾಹಿತಿ, ರಂಗಕರ್ಮಿ, ನಟ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಇತಿಹಾಸ, ಪುರಾಣ ಕಥೆಗಳನ್ನು ಆಧರಿಸಿ ಬರೆದ ನಾಟಕಗಳು ಇಂದಿನ ವಸ್ತುಸ್ಥತಿಯನ್ನು ವಿಶ್ಲೇಷಿಸುವ ರೀತಿ ಅಪೂರ್ವವಾದುದು. ಅವರ ನಾಟಕಗಳು ದೇಶ- ವಿದೇಶದ ಹಲವು ಭಾಷೆಗಳಿಗೆ ಅನುವಾದಗೊಂಡು ಪ್ರದರ್ಶನಗೊಂಡವು. ಆ ಮೂಲಕ ಕನ್ನಡ ಸಂಸ್ಕೃತಿಯ ಕಂಪನ್ನು ಜಗತ್ತಿನ ಉದ್ದಗಲಕ್ಕೂ ಪಸರಿಸಿದ ಕೀರ್ತಿ ಅವರದು ಎಂದು ಮುಖ್ಯಮಂತ್ರಿಗಳು ಟ್ವೀಟ್ ಮಾಡುವ ಮೂಲಕ ಸ್ಮರಿಸಿದ್ದಾರೆ.