ನವದೆಹಲಿ(ಜು,09): ರಾಜ್ಯ ಮೈತ್ರಿ ಸರ್ಕಾರ ಪತನದ ಅಂಚಿನತ್ತ ಸಾಗುತಿದ್ದ್ರು ಸರ್ಕಾರವನ್ನು ಉಳಿಸಿಕೊಳ್ಳಲು ಪಣತೊಟ್ಟಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಹರಸಾಹಸ ಪಡುತ್ತಿದ್ದಾರೆ.

ಸೋಮವಾರ ದೆಹಲಿಯಲ್ಲಿ ಜಯನಗರ ಶಾಸಕಿ ಸೌಮ್ಯ ರೆಡ್ಡಿ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮನವೊಲಿಸಿದ್ದು, ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸೌಮ್ಯ ಹಾಜರಾಗಿದ್ದಾರೆ.

ಸೋಮವಾರ ನವದೆಹಲಿಯಲ್ಲಿ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದ ಸೌಮ್ಯ ರೆಡ್ಡಿ, ತಮ್ಮ ಅಹವಾಲುಗಳನ್ನೂ ಹೇಳಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಸೋನಿಯಾ ಗಾಂಧಿ ಸಮಸ್ಯೆಗಳಿಗೆ ಪರಿಹಾರ ಹುಡುಕವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಸುಮಾರು 15 ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ, ಪಕ್ಷನಿಷ್ಠೆಗೆ ಕಾಂಗ್ರೆಸ್‍ನಲ್ಲಿ ಬೆಲೆ ಇದೆ. ಮುಂದೆ ಎಲ್ಲರಿಗೂ ಒಳ್ಳೆಯ ಭವಿಷ್ಯ ಇದೆ ಎಂದು ಸೋನಿಯಾ ಅಭಯ ನೀಡಿದ್ದು, ಇದರಿಂದ ಸೌಮ್ಯ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.

ನಿಮ್ಮ ತಂದೆ ರಾಮಲಿಂಗಾ ರೆಡ್ಡಿ ಅವರನ್ನೂ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸಿ ಎಂದು ಸೋನಿಯಾ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.