ಬೆಂಗಳೂರು(ಜೂನ್.20) ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿರುವ ಹೆಚ್.ವಿಶ್ವನಾಥ್ ಅವರ ರಾಜೀನಾಮೆ ಅಂಗೀಕಾರ ವಿಚಾರದ ಬೆನ್ನಲ್ಲೇ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸುದ್ದಿಗೋಷ್ಠಿಯನ್ನು ನಡೆಸಿದ್ದಾರೆ.

ಸಮ್ಮಿಶ್ರ ಸರ್ಕಾರ ಮುಂದುವರಿದರೆ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗುತ್ತದೆ ಎಂದು ಕೆಲವು ನಾಯಕರು ಮಾಧ್ಯಮಗಳಲ್ಲಿ ಹೇಳುತ್ತಿದ್ದಾರೆ. ಆದರೆ ಮೈತ್ರಿ ಸರ್ಕಾರವನ್ನು ನಾನು ರಚನೆ ಮಾಡಿಲ್ಲ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಒತ್ತಾಯದ ಮೇರೆಗೆ ಮೈತ್ರಿ ಸರ್ಕಾರ ರಚನೆಯಾಗಿದೆ ಎಂದು ದೇವೇಗೌಡರು ಹೇಳಿದರು.

ನಾನು ಅಂದೆ ಕಾಂಗ್ರೆಸ್ ನಾಯಕರಿಗೆ ಮೈತ್ರಿ ಸರ್ಕಾರ ರಚನೆ ಬೇಡ ಎಂದು ಹೇಳಿದ್ದೆ. ಕಾಂಗ್ರೆಸ್ ನ ನಾಯಕರಾದ ಗುಲಾಂ ನಬಿ ಆಝಾದ್ ನಮ್ಮ ಕೈಹಿಡಿದು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲೇಬೇಕು ಎಂದು ಮನವಿಯನ್ನು ಮಾಡಿಕೊಂಡರು.
ನಾನು ಆಗುವುದಿಲ್ಲ ಎಂದು ಹೇಳಿ ಬಂದಿದ್ದೆ. ಆದರೂ ಬೆಳಿಗ್ಗೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಬೇಕು ಮನವಿಯನ್ನು ಮಾಡಿಕೊಂಡರು. ನಂತರ ಅಲ್ಲಿಂದ ಇಲ್ಲಿಯವರೆಗೂ ಈ ಸರ್ಕಾರ ನಡೆದು ಬಂದಿದೆ ಎಂದರು.

ಮೈತ್ರಿ ಸರ್ಕಾರಕ್ಕೆ ಧಕ್ಕೆ ಬರುವ ರೀತಿ ನಾವು ನಮ್ಮ ಪಕ್ಷ ಎಂದು ನಡೆದುಕೊಳ್ಳುವುದಿಲ್ಲ. ಮುಂದಿನ ಚುನಾವಣೆಗಳಿಗೆ ಪಕ್ಷವನ್ನು ತಯಾರಿ ಮಾಡುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಮ್ಮ ಅಭ್ಯರ್ಥಿಗೆ ಸನ್ಮಾನ ಮಾಡಲಾಗಿತ್ತು. ನಾಳೆ ನಮ್ಮ ಪರಾಜಿತ ಅಭ್ಯರ್ಥಿಗಳ ಸಭೆಯನ್ನು ನಡೆಸಿ ಅವರಿಗೂ ಗೌರವವನ್ನು ನೀಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ಇನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿರುವ ಹೆಚ್.ವಿಶ್ವನಾಥ್ ಅವರ ಜೊತೆ ನಾನು ಮಾತನಾಡಿ ರಾಜೀನಾಮೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿಯನ್ನು ಮಾಡುತ್ತೇನೆ ಎಂದು ಹೇಳಿದರು.