ನವದೆಹಲಿ (ಏ. 3): ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಪ್ರಿಯಾಂಕಾ ಗಾಂಧಿ ಸೌಂದರ್ಯದ ಕುರಿತು ಬಿಜೆಪಿ ನಾಯಕರು ಒಂದಲ್ಲೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಿದ್ದಾರೆ.

ಉತ್ತರಪ್ರದೇಶದ ಮೀರತ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಜಯಕರಣ್ ಗುಪ್ತ, ಕಾಂಗ್ರೆಸ್ ನಾಯಕರು ಯಾವಾಗಲೂ ‘ಅಚ್ಚೇ ದಿನ್’ ಬಂದಿದೆಯಾ ಎಂದು ಕೇಳುತ್ತಾರೆ. ಸ್ಕರ್ಟ್ ಧರಿಸುತ್ತಿದ್ದವಳು ಸೀರೆಯುಟ್ಟು, ದೇವಸ್ಥಾನಗಳಿಗೆ ಹೋಗಿ, ಗಂಗಾಮಾತೆಗೆ ನಮಿಸುವಂತಾಗಿರುವುದು ಅಚ್ಚೇ ದಿನ್ ಅಲ್ಲವೇ ಎಂದು ವ್ಯಂಗ್ಯವಾಡಿದ್ದಾರೆ.

ಈ ಮೊದಲು ಬಿಜೆಪಿ ಸಂಸದ ಹರೀಶ್ ದ್ವಿವೇದಿ, ದೆಹಲಿಯಲ್ಲಿದ್ದಾಗ ಜೀನ್ಸ್- ಟಿ ಶರ್ಟ್ ಧರಿಸುವ ಪ್ರಿಯಾಂಕಾ ಉಸ್ತುವಾರಿ ವಹಿಸಿಕೊಂಡ ಮೇಲೆ ಮತಕ್ಷೇತ್ರಗಳಿಗೆ ಚುನಾವಣಾ ಪ್ರಚಾರಕ್ಕೆ ಹೋಗುವಾಗ ಸೀರೆ ಧರಿಸಿ ಹಣೆಗೆ ಕುಂಕುಮವನ್ನಿಟ್ಟುಕೊಂಡು ಹೋಗುತ್ತಾರೆ ಎಂದು ಹೇಳಿದ್ದರು.

ಪ್ರಿಯಾಂಕಾ ಗಾಂಧಿ ಸ್ಕರ್ಟ್ ಹಾಕುತ್ತಿದ್ದ ಹುಡುಗಿ ಎಂದು ಹೇಳಿರುವ ಜಯಕರಣ್ ಗುಪ್ತ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಟು ಟೀಕೆಗಳು ವ್ಯಕ್ತವಾಗಿವೆ.