ಬೆಂಗಳೂರು(ಜೂ:20): ರಕ್ಷಿತ್‌ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಬಿಡುಗಡೆಗಾಗಿ ಕಾಯುತ್ತಿರುವ ಬೆನ್ನಲ್ಲೇ, ಮತ್ತೆ ಅವರು ನಿರ್ದೇಶನದತ್ತ ಮುಖ ಮಾಡಿದ್ದಾರೆ. ಈ ಬಾರಿ ಅವರು ಭಾರೀ ಬಜೆಟ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಈ ಚಿತ್ರಕ್ಕೆ ‘ಪುಣ್ಯಕೋಟಿ’ ಎಂದು ಹೆಸರಿಟ್ಟಿದ್ದಾರೆ.

ಇದೊಂದು ಹೆಚ್ಚು ಬಜೆಟ್ ನ ಸಿನಿಮಾ. ಎರಡು ಮೂರು ವರ್ಷಗಳಿಂದ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಶ್ರೀಮನ್ನಾರಾಯಣ ಚಿತ್ರ ರಿಲೀಸ್‌ ಆಗುತ್ತಿದ್ದಂತೆಯೇ ಈ ಸಿನಿಮಾಗೆ ಚಾಲನೆ ಸಿಗಲಿದೆ. ಬಹುಕೋಟಿಯ ಚಿತ್ರ ಇದಾಗಿದ್ದು, ಇಂಥದ್ದೊಂದು ಚಿತ್ರವನ್ನು ಮಾಡಲು ಶ್ರೀಮನ್ನಾರಾಯಣ ಚಿತ್ರವು ಧೈರ್ಯ ತುಂಬಿದೆ’ ಎಂದು ರಕ್ಷಿತ್‌ ಶೆಟ್ಟಿತಿಳಿಸಿದ್ದಾರೆ.

ಇದೊಂದು ವಿಶೇಷ ಬಗೆಯ ಚಿತ್ರ. ಪುಣ್ಯಕೋಟಿಯ ಕಥೆಯನ್ನು ಈಗಾಗಲೇ ನಾವು ಕೇಳಿದ್ದೇವೆ. ಅದನ್ನು ನೆನಪಿಸುವಂತಹ ಟೈಟಲ್‌ ಅನ್ನು ನಮ್ಮ ಚಿತ್ರಕ್ಕೆ ಇಡಲು ಕಾರಣವಿದೆ. ಕಥೆಗೂ ಮತ್ತು ಟೈಟಲ್‌ಗೂ ಹೋಲಿಕೆ ಆಗುತ್ತದೆ. ಅದು ಹೇಗೆ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಿ’ ಎಂದು ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.